ಮಂಗಳೂರು, ಮಾ 19 (MSP): ಸ್ಮಾರ್ಟ್ ಸಿಟಿ ಎಂದು ಬಿಂಬಿತವಾಗಿರುವ ಮಂಗಳೂರಿನ ಕೊಡಿಕಲ್ ಕಟ್ಟೆಯಲ್ಲೊಂದು ನತದೃಷ್ಟ ಕುಟುಂಬವಿದೆ. ಈ ಕುಟುಂಬ ಬದುಕುವ ಸೂರಿನ ಒಳಹೊಕ್ಕರೆ ಸಾಕು ಕಲ್ಲು ಹೃದಯವೂ ಕರಗುತ್ತದೆ. ಹೆಜ್ಜೆಗೊಂದರಂತೆ ಕಷ್ಟ- ಕಾರ್ಪಣ್ಯಗಳು ಕಣ್ಣ ಮುಂದೆ ಪ್ರತ್ಯಕ್ಷವಾಗಿ ಹೃದಯ ಹಿಂಡುತ್ತದೆ.
ಕೊಡಿಕಲ್ ಕಟ್ಟೆಯ ಪುಟ್ಟ ಮನೆಯಲ್ಲಿ ಬದುಕುವ ಈ ಇಬ್ಬರು ಸಹೋದರರು ಚರಣ್ (37) ಮತ್ತು ಕಿರಣ್ (27). ಇಬ್ಬರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಕಲಚೇತನರಾಗಿದ್ದಾರೆ. ಸ್ವಂತ ಸೂರಿಲ್ಲ, ತುತ್ತು ಅನ್ನಕ್ಕೂ ಕೈಚಾಚಬೇಕು, ದುಡಿದು ತಿನ್ನಬಹುದೆಂದರೆ ಮಾನಸಿಕ, ದೈಹಿಕವಾಗಿ ಅಶಕ್ತರು, ತಮ್ಮವರೆಂದು ಕಾಯುವ ಕೈಗಳು ಮೊದಲೇ ಇಲ್ಲ. ತುತ್ತು ಅನ್ನಕ್ಕಾಗಿ ಕೈಚಾಚುವಾಗ ಬೊಗಸೆ ಆಹಾರವನ್ನು ಕೊಡುವ ನೆರೆಹೊರೆಯವರು ಕೂಡಾ ಆರ್ಥಿಕವಾಗಿ ಹಿಂದುಳಿದವರೆ. ಇಂತಹ ದಯಾನೀಯ ಪರಿಸ್ಥಿತಿಯಲ್ಲಿ ಸಹೋದರರಿಬ್ಬರು ಕರುಣಾಜನಕವಾಗಿ ಬದುಕುತ್ತಿರುವ ರೀತಿ ಕಣ್ಣೀರು ತರಿಸುತ್ತದೆ.
ಹಲವು ವರ್ಷಗಳ ಹಿಂದೆಯೇ ಕಿರಣ್ ಮತ್ತು ಚರಣ್ ಅವರ ತಂದೆ ಗತಿಸಿದಾಗ ಅಸ್ವಸ್ಥ ಮಕ್ಕಳ ಜವಬ್ದಾರಿ ತಾಯಿಯ ಹೆಗಲ ಮೇಲಿತ್ತು. ನೊಂದ ಜೀವಗಳ ಕಷ್ಟ ನೋಡಲಾಗದೇ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ತಾಯಿ , ಯಾರನ್ನಾದರೂ ಕಾಡಿ ಬೇಡಿಯಾದರೂ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು.
ಆದರೆ ವಿಧಿ ವಿಪರ್ಯಾಸ ಎಂದರೆ ಇದೇ ಇರಬೇಕು ನೋಡಿ. ಇವರಿಬ್ಬರ ಜೀವನಕ್ಕೆ ಆಧಾರವಾಗಿದ್ದ ತಾಯಿಯೂ ಇದೀಗ ವಿಧಿವಶರಾಗಿದ್ದಾರೆ. ಸ್ಥಳೀಯ ನಗರಪಾಲಿಕೆ ಸದಸ್ಯ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ತಾಯಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಸದ್ಯ ಸ್ಥಳೀಯ ಕುಟುಂಬವೊಂದರ ನೆರವಿನಿಂದ ಮನೆಯೊಂದರಲ್ಲಿ ಬದುಕುತ್ತಿದ್ದಾರೆ. ಸಹೋದರರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಕಂಡು ಸ್ಥಳೀಯ ಕುಟುಂಬವೊಂದು ಊಟೋಪಚಾರ ವ್ಯವಸ್ಥೆಯನ್ನು ಮಾಡುತ್ತಿದೆ. ಆದರೆ ಆಹಾರದ ಸಹಾಯ ನೀಡುತ್ತಿದ್ದ ಮಹಿಳೆಯೂ ಬಿದ್ದು ಕಾಲು ಮುರಿತಕ್ಕೊಳಗಾಗಿ ಅವರದ್ದು ಯಾಚನೀಯ ಪರಿಸ್ಥಿತಿಯಾಗಿದೆ.
ಕಷ್ಟ- ಕಾರ್ಪಣ್ಯ ಮಧ್ಯೆ ಪ್ರಪಂಚದ ಆಗುಹೋಗುಗಳ ಅರಿವೇ ಇರದೆ, ತುತ್ತಿಗಾಗಿ ಕೈಚಾಚುವ ಸಹೋದರರಿಬ್ಬರನ್ನು ಕಾಯುವ ಕೈಗಳು ಸಹಾಯಬೇಕಾಗಿದೆ.