ಉಡುಪಿ, ಮಾ 14 (DaijiworldNews/HR): ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಬಹಳ ಸಲ ಉಡುಪಿಗೆ ಬಂದಿದ್ದಾರೆ ಆದರೆ ಒಮ್ಮೆಯೂ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿಲ್ಲ. ಸಿದ್ದರಾಮಯ್ಯನವರು ಕೃಷ್ಣನ ಶಾಪದಿಂದಲೇ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತ ಕನಕದಾಸರ ಪುತ್ಥಳಿ ಕೃಷ್ಣ ಮಠದಲ್ಲಿದೆ. ಕನಕನಿಗೂ ಕೃಷ್ಣನಿಗೆ ವಿಶೇಷವಾದ ಸಂಬಂಧ ಇದೆ. ಕೃಷ್ಣನ ಸ್ಪೂರ್ತಿ ಕನಕನಿಗೆ ಸಿಕ್ಕಿತು. ಇಂತಹ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಭೇಟಿ ಕೊಟ್ಟಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೃಷ್ಣಮಠಕ್ಕೆ ಬನ್ನಿ ನಿಮಗೆ ಒಳ್ಳೇದಾಗುತ್ತೆ. ನಿಮಗೆ ಒಳ್ಳೆದಾಗಲಿ ಅನ್ನೋ ಉದ್ದೇಶದಿಂದ ಹೇಳುತ್ತಿದ್ದೇನೆ. ಕೃಷ್ಣಮಠಕ್ಕೆ ಬಂದು ನಿಮ್ಮ ಪಾಪ ಕಳೆದುಕೊಳ್ಳಿ. ಸಿದ್ದರಾಮಯ್ಯ ಮೇಲೆ ಪ್ರೀತಿಯಿಂದ ಈ ಮಾತು ಹೇಳುತ್ತಿದ್ದೇನೆ. ರಾಜಕೀಯ ಉದ್ದೇಶದಿಂದ ಈ ರೀತಿ ಹೇಳಿಲ್ಲ. ಪ್ರೀತಿ ಇಲ್ಲದೆ ಇದ್ರೆ ರಾಜಕೀಯ ಮಾಡಕ್ಕೆ ಸಾಧ್ಯವಿಲ್ಲ ಎಂದರು.
ಕಾರ್ಕಳದಲ್ಲಿ ಸುನಿಲ್ ಕುಮಾರ್ ವಿರುದ್ಧ ಮುತಾಲಿಕ್ ಸ್ಪರ್ಧೆ ವಿಚಾರ ಕುರಿತು ಮಾತನಾಡಿದ ಅವರು, ಯಾರು ಬೇಕಾದರೂ ಯಾವುದೇ ಚುನಾವಣೆಯಲ್ಲಿ ನಿಂತು ಕೊಳ್ಳಬಹುದು. ಹಿಂದೂ ಸಂಘಟನೆ, ಹಿಂದೂ ಸಮಾಜವನ್ನು ನಾವು ಕೊಂಡುಕೊಂಡಿಲ್ಲ. ನಾವು ಹಿಂದೂ ಸಮಾಜದ ರಕ್ಷಣೆಗೆ ಏನೇನು ಬೇಕು ಅದನ್ನು ಮಾಡಿದ್ದೇವೆ. ಬಿಜೆಪಿ ಪಕ್ಷದ ನಾಲ್ಕು ಅಂಶದಲ್ಲಿ ಅದು ಕೂಡ ಸೇರಿದೆ.
ಹಿಂದೂ ಸಮಾಜ ರಕ್ಷಣೆಗೆ ಬೇರೆಯವರ ಹೊರಡಲಿ ಅವರಿಗೂ ಅಧಿಕಾರವಿದೆ. ಹಿಂದೂ ಸಮಾಜ ಯಾರು ರಕ್ಷಣೆ ಮಾಡುತ್ತಾರೆ ಎಂದು ಮತದಾರರು ತೀರ್ಮಾನ ಮಾಡಲಿ. ಮುತಾಲಿಕ್ ಅವರು ಬಿಜೆಪಿಯವರಲ್ಲ. ಕಾಂಗ್ರೆಸ್ ನವರು ಕಾರ್ಕಳದಲ್ಲಿ ಏನೇ ಮಾಡಿದರು ಅಟ್ಟರ್ ಫ್ಲಾಪ್ ಆಗುತ್ತಾರೆ ಎಂದಿದ್ದಾರೆ.
ರಾಜ್ಯದಲ್ಲಿ ಆಜಾನ್ ಗೆ ಡೆಸಿಬಲ್ ಇಳಿಸುವ ಚರ್ಚೆ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರೀಕ್ಷೆ ನಡೆಯುತ್ತಿದೆ, ಹಲವಾರು ಕಾರ್ಯಕ್ರಮಗಳಾಗುತ್ತಿದೆ. ಬೆಳಗ್ಗೆ ಮಧ್ಯಾಹ್ನ ಸಂಜೆ ನಾಲ್ಕಾರು ಮೈಕ್ ನಲ್ಲಿ ಕೂಗ್ತಾರೆ. ಆಸ್ಪತ್ರೆ ಸಾರ್ವಜನಿಕ ಕ್ಷೇತ್ರದಲ್ಲಿ ದೊಡ್ಡ ಶಬ್ದ ಸಮಸ್ಯೆ ಆಗುತ್ತದೆ. ನನಗೆ ಅಭಿಪ್ರಾಯ ಹೇಳಲು ಯಾವುದೇ ಮುಲಾಜಿಲ್ಲ. ನನ್ನ ಹೇಳಿಕೆ ವಿವಾದಾತ್ಮಕ ಆಗಲು ಸಾಧ್ಯವಿಲ್ಲ. ರಾಜ್ಯದ ಜನರ ಅಭಿಪ್ರಾಯವೂ ಹೀಗೆಯೇ ಇದೆ ಎಂದು ಹೇಳಿದ್ದಾರೆ.