ಬಹರೈನ್, ಮಾ. 13 (DaijiworldNews/SM): ಇಲ್ಲಿನ ಇಂಡಿಯನ್ ಕ್ಲಬ್ಬಿನ ಹೊರಾಂಗಣ ಕ್ರೀಡಾಂಗಣದಲ್ಲಿ ಮಾರ್ಚ್ 17ರ ಶುಕ್ರವಾರದಂದು 'ಕರಾವಳಿ ಸಂಭ್ರಮ' ಎನ್ನುವ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದು ಕಾರ್ಯಕ್ರಮವು ಸಂಜೆ 4 ಗಂಟೆಗೆ ಆರಂಭಗೊಳ್ಳಲಿದೆ.
'ಗಿರಗಿಟ್' ತುಳು ಚಿತ್ರದ ಖಡಕ್ ವಿಲನ್ ಆಗಿ ತುಳುನಾಡಿನ ಜನರ ಮನಸ್ಸನ್ನು ಗೆದ್ದಿರುವ ರೋಷನ್ ಶೆಟ್ಟಿ ಯವರ ಸಾರಥ್ಯದಲ್ಲಿ ಕರಾವಳಿಯ ಕಲೆ, ಸಂಸ್ಕ್ರತಿಯನ್ನು ದ್ವೀಪದಲ್ಲಿ ಪಸರಿಸುವ 'ಕರಾವಳಿ ಸಂಭ್ರಮ' ಕಾರ್ಯಕ್ರಮವು ಜರುಗಲಿದ್ದು, ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ದ್ವೀಪದ ಕನ್ನಡಿಗ ತುಳುವ ಸಮುದಾಯದಲ್ಲಿ ಇದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು ಸಾವಿರಾರು ಜನರು ಈ ಬ್ರಹತ್ ಸಾಂಸ್ಕ್ರತಿಕ ಜಾತ್ರೆಗೆ ಸಾಕ್ಷಿಯಾಗಲಿದ್ದಾರೆ.
ಈ ಕಾರ್ಯಕ್ರಮಕ್ಕೆ ನಾಡಿನ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್, ತುಳು ರಂಗಭೂಮಿ ಹಾಗು ಚಲನ ಚಿತ್ರ ನಟ,ನಿರ್ದೇಶಕ ಡಾ.ದೇವದಾಸ್ ಕಾಪಿಕಾಡ್, ಖ್ಯಾತ ನಟ ಹಾಗು ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ, ಆಸ್ಟ್ರೇಲಿಯಾದ ಖ್ಯಾತ ಕನ್ನಡಿಗ ಉದ್ಯಮಿ ನಿಶಿಕಾಂತ್ ಸೆಮಿತ, ಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಬಜ್ಪೆ ಝಕಾರಿಯಾ, ಕೆ. ಎಸ್.ಶೇಖ್, ಆಳ್ವಾಸ್ ಎಜುಕೇಶನ್ ಟ್ರಸ್ಟ್ ನ ವಿವೇಕ್ ಆಳ್ವಾ, ಬಿರುವೆರ್ ಕುಡ್ಲದ ಸ್ಥಾಪಕರಾದ ಉದಯ್ ಪೂಜಾರಿ, ಶರ್ಮಿಳಾ ಡಿ.ಕಾಪಿಕಾಡ್, ಎವರ್ ಗ್ರೀನ್ ಬಯೋಟೆಕ್ ಇಂಡಿಯಾ ಸಂಸ್ಥೆಯ್ ಆಡಳಿತ ನಿರ್ದೇಶಕ ಅಶ್ವಥ್ ಹೆಗ್ಡೆ, ಜನಪ್ರಿಯ ನಿರೂಪಕ ಹಾಗು ಆರ್.ಜೆ ಅನುರಾಗ್ ಬಂಗೇರ, ನಟ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ, ಖ್ಯಾತ ಸಂಗೀತ ನಿರ್ದೇಶಕ ಗುರು ಬಾಯಾರ್ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿರುವ ಪ್ರತಿಭಾ ಸ್ಪರ್ಧೆಯಲ್ಲಿ ದ್ವೀಪದ ಪ್ರತಿಭಾವಂತ ಕಲಾವಿದರುಗಳ 'ಕಲಶ' 'ಬಹರೈನ್ ಬಿಲ್ಲವಾಸ್' 'ತುಳುನಾಡ ತುಡರ್' 'ಕೆನರಾ ಕೊಂಕಣ್ಸ್' 'ವಿಶ್ವ ತರಂಗ' ಹಾಗು 'ವಿಶ್ವ ತರಂಗ' ಎನ್ನುವಂತಹ 5 ತಂಡಗಳು ಸ್ಪರ್ಧಿಸಲಿದ್ದು ನಾಡಿನ ವೈವಿಧ್ಯಮಯ ಕಲಾಪ್ರಕಾರಗಳನ್ನು ರಂಗದಲ್ಲಿ ಅನಾವರಣಗೊಳಿಸಲಿದ್ದಾರೆ. ಡಾ ದೇವದಾಸ್ ಕಾಪಿಕಾಡ್ ಹಾಗು ತಂಡದವರಿಂದ 'ಕೋಮಿಡಿ ಬಿತ್ತಿಲ್' ಎನ್ನುವಂತಹ ಹಾಸ್ಯ ಪ್ರಹಸನ ಹಾಗು ಗುರಕಿರಣ್ ರವರ ಹಾಡುಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿದೆ. ಕಾರ್ಯಕ್ರಮದ ಆರಂಭದಲ್ಲಿ ದ್ವೀಪದ ಕಲಾವಿದರುಗಳಿಂದ ತುಳುನಾಡಿನ ಹೆಮ್ಮೆಯ ಕಲೆಯಾದ 'ಹುಲಿ ಕುಣಿತ' ದ ಪ್ರದರ್ಶನವಿದ್ದು ನಾಡಿನ ಖ್ಯಾತ ತಾಸೆ ವಾದಕರಾದಂತಹ ಪ್ರಭಾಕರ್ ಉರಿಂಜೆಬೆಟ್ಟು ಇದಕ್ಕಾಗಿಯೇ ವಿಶೇಷವಾಗಿ ದ್ವೀಪಕ್ಕೆ ಆಗಮಿಸಲಿದ್ದಾರೆ. ಕರಾವಳಿಯ ಜನಪ್ರಿಯ ತಿಂಡಿ, ತಿನಸುಗಳ, ಆಹಾರ ಪದಾರ್ಥಗಳ ಪ್ರದರ್ಶನ ಹಾಗು ಮಾರಾಟ ಇರಲಿದೆ.
ಸಂಪೂರ್ಣ ಕಾರ್ಯಕ್ರಮವನ್ನು ತನ್ನ ಕ್ಯಾಮಾರದಲ್ಲಿ ಖ್ಯಾತ ಛಾಯಾಗ್ರಾಹಕ ದಯಾನಂದ್ ಕುಕ್ಕಾಜೆ ಸೆರೆ ಹಿಡಿಯಲಿದ್ದಾರೆ. ಈ ಒಟ್ಟು ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಅನುರಾಗ್ ಬಂಗೇರ ರವರು ನಿರೂಪಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ದ್ವೀಪದ ಎಲ್ಲಾ ಕಲಾಪ್ರೇಮಿಗಳಿಗೆ ಪ್ರವೇಶ ಮುಕ್ತವಾಗಿದ್ದು ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ ಶ್ರೀ ರೋಷನ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39788945 ಮೂಲಕ ಸಂಪರ್ಕಿಸಬಹುದು.