ಕುಂದಾಪುರ, ಮಾ 13 (DaijiwordNews/HR): ದೌರ್ಜನ್ಯ ನಿಷೇಧ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತನ್ನಿ. ಇಲ್ಲದೇ ಇದ್ದರೆ ಕುರ್ಚಿ ಖಾಲಿ ಮಾಡಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ ಆಗ್ರಹಿಸಿದ್ದಾರೆ.
ಹುಜನ ಸಮಾಜ ಪರಿವರ್ತನ ಚಳುವಳಿ ರಾಜ್ಯ ಸಮಿತಿ ಹಾಗೂ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರು ವತಿಯಿಂದ ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕೋಟದ ಮನೆ ಮುಂದೆ ನಡೆಸಲಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, 1989 ಎಸ್.ಸಿ.ಎಸ್.ಟಿ. ದೌರ್ಜನ್ಯ ನಿಷೇಧ ಕಾಯ್ದೆ ಅಡಿಯಲ್ಲಿಬರುವ ಸಂತ್ರಸ್ಥರು, ಕುಟುಂಬದ ಸದಸ್ಯರು ಹಾಗೂ ಅವಲಂಭಿತರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಈ ಬಗ್ಗೆ ಸಾಕಷ್ಟು ಹೋರಾಟಗಳನ್ನು ನಡೆಸಲಾಗುತ್ತಿದೆ. ಇದೀಗ ಅಂತಿಮ ಹಂತದ ಹೋರಾಟದಲ್ಲಿದ್ದು, ಮಾಡು ಇಲ್ಲವೇ ಮಡಿ ಎನ್ನುವ ಅನಿರ್ದಿಷಟಾವಧಿ ಹೋರಾಟಕ್ಕೆ ನಾಂದಿ ಹಾಡಲಾಗಿದೆ ಎಂದವರು ತಿಳಿಸಿದರು.
ವಿವಿಧ ಸಚಿವರ ಮನೆಯ ಮುಂದೆ, ಕಬ್ಬನ್ ಪಾರ್ಕ್, ವಿಧಾನಸೌಧಗಳಲ್ಲಿಯೂ ನಾವು ಪ್ರತಿಭಟನೆ ನಡೆಸಿದ್ದೇವೆ. ಎಲ್ಲಾ ಪಕ್ಷಗಳ ಸರ್ಕಾರಗಳಿಗೂ ನೂರಾರು ಬಾರಿ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಈ ಬಗ್ಗೆ ಎಚ್ಚರವಹಿಸಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಗಟ್ಟಿಗೊಳಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.
ಇನ್ನು ಪ್ರತಿಭಟನೆಯ ಸಂದರ್ಭ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮನೆಯಲ್ಲಿರದೇ ಬೆಂಗಳೂರಿನಲ್ಲಿದ್ದಾರೆಂದು ತಿಳಿದು ಬಂದಿದೆ. ಶ್ರೀನಿವಾಸ ಪೂಜಾರಿ ಬರುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.