ಮಂಗಳೂರು, ಮಾ 13 (DaijiwordNews/HR): ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವರ ಪಕ್ಷದ ಬೆಂಬಲಿಗರು ವಿಮಾನನಿಲ್ದಾಣದಿಂದಲೇ ಮೆರವಣಿಗೆಯಲ್ಲಿ ಕರೆ ತಂದಿದ್ದರು. ಹೀಗಾಗಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಜಯೋತ್ಸವ ಮೆರವಣಿಗೆ ಆಚರಿಸುವುದಕ್ಕೆ ಪ್ರೇರಣೆ ನೀಡಿದ್ದೇ ಡಿಕೆಶಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ವಿಜಯ ಸಂಕಲ್ಪ ಯಾತ್ರೆಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಡಾಳ್ ವಿರೂಪಾಕ್ಷಪ್ಪ ಅವರು ಈ ರೀತಿ ಮಾಡಿದ್ದು ನೂರಕ್ಕೆ ನೂರು ತಪ್ಪು. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ಸ್ಪಷವಾಗಿ ಇದನ್ನು ಟೀಕೆ ಮಾಡಿದ್ದಾರೆ. ಆದರೆ ಡಿಕೆಶಿ ಮೆರವಣಿಗೆ ಮಾಡಿದ್ದಾಗ ಕಾಂಗ್ರೆಸ್ ನಾಯಕರು ಒಬ್ಬರಾದರೂ ಅದನ್ನು ತಪ್ಪು ಅಂತ ಹೇಳಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಾವೂರಿನಲ್ಲಿ ಭಾನುವಾರ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮುಸ್ಲೀಮರ ಮತ ಬೇಕಾಗಿಲ್ಲ ಎಂದು ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಅವರು, ಎಲ್ಲ ಮುಸ್ಲಿಮರ ಮತ ಬೇಡ ಎಂದಿಲ್ಲ. ಪಿಎಫ್ಐ, ಎಸ್ಡಿಪಿಐ ಬೆಂಬಲಿಸುವ ಮುಸ್ಲಿಮರ ಕುರಿತಾಗಿ ಆ ರೀತಿ ಹೇಳಿದ್ದೇನೆ ಎಂದರು.
ನಾನು ಪ್ರತಿನಿಧಿಸುವ ಕ್ಷೇತ್ರದ 60ಕ್ಕೂ ಹೆಚ್ಚು ಬೂತ್ಗಳಲ್ಲಿ ಮುಸ್ಲಿಮರ 62 ಸಾವಿರ ಮತಗಳಿವೆ. ಹಿಂದಿನ ಚುನಾವಣೆಯಲ್ಲಿ ಅವರೊಬ್ಬರೂ ನನಗೆ ಮತ ಹಾಕಿರಲಿಲ್ಲ. ಕಳೆದ ಚುನಾವಣೆಯಲ್ಲಿ ಯಾವ ಮುಸ್ಲಿಮರ ಬಳಿಯೂ ನಾನು ಮತ ಕೇಳಿಲ್ಲ. ಆದರೂ 5 ಸಾವಿರಕ್ಕೂ ಅಧಿಕ ಮುಸ್ಲಿಮರು ನನಗೆ ಮತ ಹಾಕಿದ್ದಾರೆ. ಅವರಿಗೆ ಸವಲತ್ತು ಒದಗಿಸುವ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲ ಎಂದು ಹೇಳಿದ್ದಾರೆ.