ಉಡುಪಿ, ಮಾ 13 (DaijiworldNews/MS): ಮಲ್ಪೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಸುಬ್ಬಣ್ಣ ಅವರ ಸಾವಿಗೆ ಸಂಬಂಧಿಸಿದಂತೆ ಸುಬ್ಬಣ್ಣ ಸಾವಿಗೆ ಕಾರಣರಾದ ಎಲ್ಲರ ವಿರುದ್ದ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರಗಿಸಬೇಕು ಎಂದು ದಲಿತ ಸಂಘಟನೆಗಳ ಸಮಿತಿಯ ಐಕ್ಯ ಹೋರಾಟ ಸಮಿತಿ ಆಗ್ರಹಿಸಿದೆ.
ಉಡುಪಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಮಾತನಾಡಿ “ಸುಬ್ಬಣ್ಣ ಅವರು ಓರ್ವ ಸಜ್ಜನ ವ್ಯಕ್ತಿಯಾಗಿದ್ದರು. ಯಾವುದೇ ಗಲಾಟೆ ಅಥವಾ ಪೋಲಿಸ್ ಕೇಸ್ ಈ ಹಿಂದೆ ಅವರ ಮೇಲೆ ಇರಲಿಲ್ಲ. ಅವರ ಸೇವೆಯನ್ನು ಗುರುತಿಸಿ ಬ್ಯಾಂಕಿನಲ್ಲಿ ಅವರಿಗೆ ಪದೋನ್ನತಿ ಮತ್ತು ಬ್ಯಾಂಕಿನ ವತಿಯಿಂದ ಸನ್ಮಾನವನ್ನು ಕೂಡಾ ಈ ಹಿಂದೆ ಮಾಡಲಾಗಿತ್ತು. ಮಾರ್ಚ್ 08 ರಂದು ಮಲ್ಪೆಯ ಹೋಟೆಲ್ ಒಂದರಲ್ಲಿ ಸುಬ್ಬಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಜೊತೆಗೆ ಅವರ ಶವದ ಬಳಿ ಒಂದು ಡೆತ್ ನೋಟ್ ಕೂಡಾ ದೊರಕಿದೆ. ಇದರ ಆಧಾರದಲ್ಲಿ ಸುಬ್ಬಣ್ಣರ ಸಹೋದರ ಸುರೇಶ್ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡೆತ್ ನೋಟ್ ನಲ್ಲಿ ಸಾವಿಗೆ ಮಾನಸಿಕ ಒತ್ತಡ, ಆಡಳಿತ ಮಂಡಳಿಯ ಒತ್ತಡದ ಬಗ್ಗೆ ಬರೆದಿದ್ದಾರೆ. ಈ ಆಧಾರದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಮತ್ತು ಇತರ ಐದು ಮಂದಿ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಪೋಲಿಸರಿಗೆ ರಾಜಕೀಯ ಒತ್ತಡ ಬರುವ ಸಾಧ್ಯತೆ ಕೂಡಾ ಇರುವುದರಿಂದ ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಈ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ದಲಿತ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ “ಮಾರ್ಚ್ ತಿಂಗಳಿನಲ್ಲಿ ವಿವಿಧ ಕಾರಣಗಳಿಗಾಗಿ ಆಡಳಿತ ಮಂಡಳಿಯಿಂದ ಒತ್ತಡ ಇರುವುದು ಸಹಜ. ಆದರೆ ಈ ಪ್ರಕರಣದಲ್ಲಿ ತೀವ್ರವಾದ ಒತ್ತಡದ ಕಾರಣದಿಂದಾಗಿ ಸುಬ್ಬಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಎಸ್ ಸಿ ಸಮುದಾಯದ ಪ್ರತಿನಿಧಿ ಇಲ್ಲದಿರುವುದು ಕೂಡಾ ಕಂಡು ಬಂದಿದೆ. ಮಾತ್ರವಲ್ಲದೇ ಘಟನೆ ನಡೆದ ದಿನ ಪೋಲಿಸರು ದೂರನ್ನು ದಾಖಲಿಸಲು ಕೂಡಾ ಮೀನಮೇಷ ಮಾಡಿ, ತದನಂತರ ವಿಳಂಬವಾಗಿ ದೂರನ್ನು ದಾಖಲಿಸಿದ್ದಾರೆ, ಮುಂದೆ ಈ ಪ್ರಕರಣದ ಕುರಿತು ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು” ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷರಾದ ಹರೀಶ್ ಸಾಲಿಯಾನ್, ಮುಖಂಡರಾದ ಶೇಖರ್ ಹೆಜಮಾಡಿ. ಶ್ಯಾಮಸುಂದರ್ ತೆಕ್ಕಟ್ಟೆ, ವಿಜಯ್ ಕೋಟ, ಆನಂದ್ ಬ್ರಹ್ಮಾವರ ಮತ್ತು ಇತರರು ಉಪಸ್ಥಿತರಿದ್ದರು.