ಮಂಗಳೂರು, ಮಾ 13 (DaijiworldNews/MS): ಆಸ್ಕರ್ ಗೆದ್ದು ಭಾರತವೇ ಹೆಮ್ಮೆ ಪಡುವಂತೆ ಮಾಡಿದ , 'ದಿ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯುಮೆಂಟರಿ ನಿರ್ದೇಶನ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆಸ್ ಅವರಿಗೆ ಮಂಗಳೂರಿನ ನಂಟಿದೆ.!
ಹೌದು ಕಾರ್ತಿಕಿ ಗೊನ್ಸಾಲ್ವ್ಸ್ ಅವರ ಕುಟುಂಬ ಬೇರು ಮಂಗಳೂರಿಗೆ ಹರಡಿಕೊಂಡಿದೆ. ಇವರು ಮಂಗಳೂರು ಕ್ಯಾಥೊಲಿಕ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥಾಪಕ, ಪಿಎಫ್ಎಕ್ಸ್ ಸಲ್ಡಾನ್ಹಾ ಅವರ ಕುಟುಂಬಕ್ಕೆ ಸೇರಿದವರು.
ಕಾರ್ತಿಕಿ ಗೊನ್ಸಾಲ್ವಿಸ್ ಅವರು ಐಐಟಿ ಮಂಡಿಯ ಮಾಜಿ ಸಂಸ್ಥಾಪಕ ನಿರ್ದೇಶಕರಾದ ತಿಮೋತಿ ಗೊನ್ಸಾಲ್ವೆಸ್ ಅವರ ಪುತ್ರಿಯಾಗಿದ್ದಾರೆ. ಪ್ರೊ.ತಿಮೋತಿ ಗೋಸಾಲ್ವೆಸ್ ಅವರು ಅಲನ್ ಗೊನ್ಸಾಲ್ವ್ಸ್ ಅವರ ಮಗ, ಅವರು ಪಿಎಫ್ಎಕ್ಸ್ ಸಲ್ಡಾನ್ಹಾಸ್ ಅವರ ಮಗಳು ಮೋನಿಕಾ ಗೋಸಾಲ್ವೆಸ್ ಅವರ ಪುತ್ರ. (ತಿಮೋತಿ ಗೊನ್ಸಾಲ್ವೆಸ್ಪಿ ಅವರು ಎಫ್ಎಕ್ಸ್ ಸಲ್ಡಾನ್ಹಾಸ್ ಅವರ ಮರಿ ಮೊಮ್ಮಗ).
ಊಟಿಯಲ್ಲಿ ಹುಟ್ಟಿ ಬೆಳೆದ ಕಾರ್ತಿಕಿ ವೃತ್ತಿಯಲ್ಲಿ ಫೋಟೊ ಜರ್ನಲಿಸ್ಟ್ ಕೂಡ ಹೌದು. ಇವರು ಮುಂಬೈನಲ್ಲಿ ನೆಲೆಸಿದ್ದು ವನ್ಯಜೀವಿ, ಪರಿಸರ-ಪ್ರಕೃತಿ ಬಗ್ಗೆ ಅಪಾರ ಕಾಳಜಿ-ಆಸಕ್ತಿ ಹೊಂದಿರುವ ಕಾರ್ತಿಕಿ ಉತ್ತಮ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ಈ ಹಿಂದೆ ಕ್ಯಾಮೆರಾ ಅಪರೇಟರ್ ಆಗಿ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್ಗಳಿಗೆ ಕಾರ್ತಿಕಿ ಕೆಲಸ ಮಾಡಿದ್ದಾರೆ. ಭಾರತದ ಬುಡಕಟ್ಟು ಸಮುದಾಯಗಳನ್ನು ಮತ್ತು ಪ್ರಕೃತಿಯೊಂದಿಗೆ ಅವರ ಒಡನಾಟವನ್ನು ದಾಖಲಿಸಲು ಹಲವೆಡೆ ಪ್ರಯಾಣಿಸಿದ್ದಾರೆ. ಎಲಿಫೆಂಟ್ ವಿಸ್ಪರರ್ಸ್ ಅದೇ ಥೀಮ್ನಲ್ಲಿ ಮೂಡಿಬಂದಿದೆ.