ಉಪ್ಪಿನಂಗಡಿ: ಅತ್ಯಂತ ಬಡ ಕುಟುಂಬದ ಹಿಂದೂ ಧರ್ಮದ ಯುವತಿಯ ವಿವಾಹವನ್ನು ನೆರೆಮನೆಯ ಮುಸ್ಲಿಂ ಬಾಂಧವರೇ ಮುಂದೆ ನಿಂತು ಮಾಡುವ ಮೂಲಕ ಸೌಹಾರ್ಧತೆ ಮೆರೆದ ಘಟನೆ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಮಾ.19ರ ಸೋಮವಾರ ನಡೆದಿದೆ.
ಅತ್ಯಂತ ಬಡ ಕುಟುಂಬದ ರೇವತಿ ಫ್ಯಾಕ್ಟರಿಯೊಂದರಲ್ಲಿ ದುಡಿಯುತ್ತಿದ್ದು ಈಕೆಗೆ ಸಾಲ್ಮರದ ಯುವಕ ಶರತ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಈಕೆಗೆ ತಂದೆತಾಯಿ ಇದ್ದರೂ ಮುಂದೆ ನಿಂತು ಮದುವೆ ಮಾಡಿಸುವಷ್ಟು ಶಕ್ತರಾಗಿರಲಿಲ್ಲ. ಹೀಗಿರುವಾಗ ಅವರ ನೆರವಿಗೆ ಬಂದಿದ್ದು ಅವರ ಮನೆ ಸಮೀಪದ ಮುಸ್ಲಿಂ ಬಂಧುಗಳು.
ಮಾನವೀಯತೆಯ ನಂಟಿನಿಂದ ಹುಡುಗಿಯ ಮನೆಯವರ ಪರವಾಗಿ ಹುಡುಗನ ಮನೆಯವರೊಂದಿಗೆ ಮಾತುಕತೆ ನಡೆಸಿ ಮದುವೆಗೆ ದಿನ ನಿಗದಿಮಾಡಿದರು. ಈ ಸಂದರ್ಭ ಅವರೊಂದಿಗೆ ಯುವತಿಯ ಕೆಲ ಬಂಧುಗಳು ಕೂಡಿಕೊಂಡರು. ಅಕ್ಕಪಕ್ಕದ ಮನೆಗಳಿಂದ ಸೋಗೆಯನ್ನು ತಂದು ಚಪ್ಪರ ಹಾಕಿದರು. ಲತೀಫ್ ಎಂಬರ ಮನೆಯಿಂದ ಮದುಮಗಳನ್ನು ಶೃಂಗರಿಸಿ ಹಿಂದೂ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಿದರು. ಮದುವೆಯ ಅಂಗವಾಗಿ ೧೫೦ ಮಂದಿಗೆ ಭರ್ಜರಿ ಊಟವನ್ನು ಸಿದ್ಧಪಡಿಸಿ ಉಣಬಡಿಸಿದರು.
ಮಾಂಗಲ್ಯ ಸೂತ್ರ, ಮದುಮಗಳ 2 ಜತೆ ವಸ್ತ್ರವನ್ನೊಳಗೊಂಡಂತೆ ಎಲ್ಲಾ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಲತೀಫ್, ನಿಹಾ ಡ್ರೆಸ್ಸಸ್ ನ ಮಾಲೀಕ ಕೆ.ಅಬೂಬಕ್ಕರ್, ಶಮೀರ್, ಪುತ್ತುಮೋನು ಮತ್ತಿತರರು ಭರಿಸಿ ಮಾನವೀಯತೆ ಮೆರೆದರು. ಜಾತಿ, ಧರ್ಮ ಮರೆತು ಹೆಣ್ಣುಮಗಳ ಬಾಳಿಗೆ ಬೆಳಕಾಗುವ ಮೂಲಕ ಈ ಮುಸ್ಲಿಂ ಬಾಂಧವರ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.