ಮಂಗಳೂರು,ಮಾ 19 (MSP): ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರನ್ನು ಎನ್ಕೌಂಟರ್ ಸಾಯಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ ವ್ಯಕ್ತಿಯೋರ್ವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾ.19 ರ ಮಂಗಳವಾರ ಬೆಳಗ್ಗೆ ಕಾವೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುತ್ತೂರು ಸಮೀಪದ ನಿವಾಸಿ ಹಕೀಮ್ ಎಂದು ಗುರುತಿಸಲಾಗಿದೆ. ಈತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು ರಜೆಯಲ್ಲಿ ತವರಿಗೆ ಬರುತ್ತಿದ್ದ ವೇಳೆ ಕಾವೂರು ಪೊಲೀಸರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.
ಡಿಸೆಂಬರ್ನಲ್ಲಿ ಕುದ್ರೋಳಿ ದೇವಸ್ಥಾನದಲ್ಲಿ ನಡೆದಿದ್ದ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪೂಜಾರಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಮ ಮಂದಿರ ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರ ಆಶಯ ಎಂದು ಜನಾರ್ದನ ಪೂಜಾರಿ ಹೇಳಿಕೆ ನೀಡಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ,ವ್ಯಕ್ತಿಯೋರ್ವ ತಾನು ಕಾಂಗ್ರೆಸ್ ಕಾರ್ಯಕರ್ತ ಎಂದು ಧ್ವನಿಮುದ್ರಿಕೆ ಮಾಡಿ ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ್ದ. ಪೂಜಾರಿ ಆರ್ ಎಸ್ಎಸ್ ಜತೆ ನಂಟು ಹೊಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ನಲ್ಲಿ ಅವರು ಸೋತಿದ್ದರು. ರಾಮ ಮಂದಿರ ಪರವಾಗಿ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದಾರೆ. ಇಂಥಹ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ಕೌಂಟರ್ ಮಾಡಿ ಸಾಯಿಸಬೇಕು. ಅಲ್ಲದೆ ರಾಮ ಮಂದಿರದ ಪರವಾಗಿ ಮಾತನಾಡುವವರನ್ನು ಕೊಲ್ಲಬೇಕು. ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು” ಎಂದಿದ್ದ ಇದು ವೈರಲ್ ಆಗಿತ್ತು.
ಪೂಜಾರಿ ಅವಹೇಳನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವರು ಜನ ಆಗ್ರಹಿಸಿ ಅಂದಿನ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರಿಗೆ ಮನವಿ ನೀಡಿದ್ದರು. ಆರೋಪಿ ಸೌದಿ ಅರೇಬಿಯಾದಲ್ಲಿ ಇರುವುದನ್ನು ಪತ್ತೆಹಚ್ಚಿ, ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು.