ಕಾರ್ಕಳ, ಮಾ 11 (DaijiworldNews/HR): ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳಲ್ಲಿ ಟಿಕೆಟ್ ಗೊಂದಲ, ಚರ್ಚೆ ಆರಂಭವಾಗಿದ್ದು, ಕಾರ್ಕಳ ಕಾಂಗ್ರೆಸ್ನಲ್ಲಿ ಇದೀಗ ಟಿಕೆಟ್ ಯಾರಿಗೆ ಸಿಗಬಹುದು ಎಂಬ ಕುತೂಹಲ ಮನೆಮಾಡಿದೆ.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎರಡು ಬಿಲ್ಲವ ಟಿಕೆಟ್ ಖಚಿತ ಆಗಿರುವುದರಿಂದ ಕಾರ್ಕಳದಲ್ಲಿ ಬಂಟರಿಗೇ ಟಿಕೆಟ್ ಆಗಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ನ ನಿಲುವಾಗಿದ್ದು, ಟಿಕೆಟ್ ಯಾರಿಗೆ ಸಿಗಬಹುದು ಎಂಬ ಕೂತುಹಲ ಕಾರ್ಕಳ ಜನತೆಯಲ್ಲಿ ಮೂಡಿದೆ.
ಉದಯ್ ಕುಮಾರ್ ಶೆಟ್ಟಿ:
ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಕಾರ್ಕಳ ಕಾಂಗ್ರೆಸ್ ಮಾತ್ರವಲ್ಲದೇ ಪ್ರಬಲ ಬಂಟ ನಾಯಕ. ಇವರು ಯಶಸ್ವಿ ಉದ್ಯಮಿಯಾಗಿ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದ ಉದಯ್ ಶೆಟ್ಟಿಗೆ ಕಳೆದ ಬಾರಿ ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದು, ಈ ಬಾರಿ ಟಿಕೆಟ್ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಸುರೇಂದ್ರ ಶೆಟ್ಟಿ:
ಸುರೇಂದ್ರ ಶೆಟ್ಟಿ ಅವರು ಸಹನಾ ಸಂಸ್ಥೆಯ ಮಾಲಕ, ಉದ್ಯಮಿ, ಬಂಟ ಸಮುದಾಯದಲ್ಲಿ ಬೆಳೆಯುತ್ತಿರುವ ನಾಯಕ. ಇವರು ಕಾರ್ಕಳದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಸೋತು ಕುಂದಾಪುರದಲ್ಲಿ ಉದ್ಯಮವನ್ನು ನಡೆಸಿಕೊಂಡಿದ್ದರು. ಆದರೆ ಬಳಿಕ ಕೆಪಿಸಿಸಿ ಸದಸ್ಯನಾಗಿ ಕಾರ್ಕಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆದರು. ಕಾಂಗ್ರೆಸ್ ಕಾರ್ಕಳದಲ್ಲಿ ಬಂಟರಿಗೆ ಟಿಕೆಟ್ ನೀಡುವುದು ಪಕ್ಕಾ ಆದರೆ ಕಾರ್ಯಕರ್ತ ಪರಿಚಯವೇ ಇಲ್ಲದ ಸುರೇಂದ್ರ ಶೆಟ್ಟಿಗೆ ಟಿಕೆಟ್ ನೀಡುವುದೇ ಎಂಬುದು ಪ್ರಶ್ನೆ ಇದೀಗ ಮೂಡಿದೆ.
ಸುಪ್ರಿತ್ ಶೆಟ್ಟಿ ಕೆದಿಂಜೆ:
ಮಿ.ಕೆದಿಂಜೆ ಎಂದೇ ಜನಜನಿತರಾದ ಸುಪ್ರಿತ್ ಶೆಟ್ಟಿ ಕೆದಿಂಜೆ ಅವರು ಕಾಂಗ್ರೆಸ್ ನಲ್ಲಿ ಗ್ರಾಮ ಪಂಚಾಯತ್ ನಲ್ಲಿ ಮೂರು ಬಾರಿ ಸದಸ್ಯನಾಗಿ ಒಂದು ಅವದಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಉತ್ತಮ ಆಡಳಿತ ನಡೆಸಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಮೊಯಿಲಿಯವರ ಶಿಷ್ಯನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಾಯಕ. ಕಾಂಗ್ರೆಸ್ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲೂ ಕಾರ್ಯಕರ್ತರ ಸಾಮಾನ್ಯ ಜನರ ಒಲವು ಇವರ ಪರವಾಗಿ ಇದ್ದು, ಇದೀಗ ಮೂವರು ಬಂಟರ ಪೈಕಿ ಯಾರಿಗೆ ಟಿಕೆಟ್ ಲಭಿಸಲಿದೆ ಎಂಬುದೇ ಕೂತುಹಲ.