ಮಂಗಳೂರು, ಮಾ 11 (DaijiworldNews/HR): ಕೊಂಕಣಿ ಕವಿ, ಕವಿತಾ ಟ್ರಸ್ಟ್ನ ಸಂಸ್ಥಾಪಕ, ದೈಜಿವರ್ಲ್ಡ್ ಸಂಸ್ಥೆಯ ನಿರ್ದೇಶಕರಾದ ಮೆಲ್ವಿನ್ ರೊಡ್ರಿಗಸ್ ಅವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಲಹಾ ಮಂಡಳಿಯ ಸಂಚಾಲಕರಾಗಿ ನವದೆಹಲಿಯ ಸಾಹಿತ್ಯ ಅಕಾಡೆಮಿಯಲ್ಲಿ ಮಾ.11 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.
ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ ಕೊಂಕಣಿ ಸಲಹಾ ಮಂಡಳಿಯ ನೇತೃತ್ವ ವಹಿಸಲು ಗೋವಾದ ಹೊರಗಿನವರೊಬ್ಬರು ಆಯ್ಕೆಯಾಗಿರುವುದು ಇದೇ ಮೊದಲಾಗಿದ್ದು, ಮುಂದಿನ 5 ವರ್ಷಗಳ ಅವಧಿಗೆ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡಮಿಯಲ್ಲಿ ಈ ಹುದ್ದೆ ಯಲ್ಲಿ ಮುಂದುವರೆಯಲಿದ್ದಾರೆ.
ಜನವರಿ 2023 ರಲ್ಲಿ ಮೆಲ್ವಿನ್ ಅವರನ್ನು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದ್ದು, ಅಕಾಡೆಮಿಗೆ ಸಂಯೋಜಿತವಾಗಿರುವ ವಿವಿಧ ಕೊಂಕಣಿ ಸಂಸ್ಥೆಗಳಿಂದ ಪಡೆದ ಹಲವಾರು ಶಿಫಾರಸುಗಳಲ್ಲಿ ಮೆಲ್ವಿನ್ ಅವರ ಹೆಸರನ್ನು ಜನರಲ್ ಕೌನ್ಸಿಲ್ ಆಯ್ಕೆ ಮಾಡಿದೆ.
ಕವಿತಾ ಟ್ರಸ್ಟ್ನ ಸಂಸ್ಥಾಪಕ ಅವರು, ಇದು ಕಾವ್ಯದ ಕುರಿತು 220 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅವರ ಪ್ರಕಟಿತ ಕೃತಿಗಳಲ್ಲಿ 1-ಕಾದಂಬರಿ, 6-ಕವನ ಸಂಗ್ರಹಗಳು, 3-ಅನುವಾದಗಳು, 2-ಪ್ರಬಂಧಗಳ ಸಂಗ್ರಹ, 6-ಸಂಪಾದಿತ ಕೃತಿಗಳು ಮತ್ತು 1-ಸಂಗೀತ ಆಲ್ಬಮ್ ಸೇರಿವೆ.
ಮೆಲ್ವಿನ್ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಅವರು 2019 ರಲ್ಲಿ ಗೋವಾದ ಕೆನಕೋನಾದಲ್ಲಿ ನಡೆದ 24 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಮತ್ತು ಅಖಿಲ ಭಾರತ ಕೊಂಕಣಿ ಪರಿಷತ್ತಿನ ಉಪಾಧ್ಯಕ್ಷರಾಗಿದ್ದು, ಅವರು ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಟ್ರಸ್ಟಿ ಕೂಡ ಆಗಿದ್ದಾರೆ.
ಇನ್ನು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹರಿಯಾಣದಿಂದ ಮಾಧವ್ ಕೌಶಿಕ್ ಹಾಗೂ ಉಪಾಧ್ಯಕ್ಷರಾಗಿ ದೆಹಲಿಯಿಂದ ಡಾ.ಕುಸುಮ್ ಶರ್ಮಾ ಆಯ್ಕೆಯಾಗಿದ್ದಾರೆ.