ಉಡುಪಿ, ಮಾ 11 (DaijiworldNews/HR): ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಇದರ ಮಲ್ಪೆ ಶಾಖೆಯ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ಇದೀಗ ಬ್ಯಾಂಕಿನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಸೇರಿದಂತೆ ಐವರ ಮೇಲೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯ ಮ್ಯಾನೇಜರ್ ಸುಬ್ಬಣ್ಣ(50) ಎಂಬವರು ಪರಿಶಿಷ್ಠ ಜಾತಿಯವರಾಗಿದ್ದು ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಮಾರ್ಚ್ 08 ರಂದು ರಾತ್ರಿ 8 ಗಂಟೆ ಯಿಂದ 8:30 ರ ನಡುವೆ ಮಲ್ಪೆಯ ರಾಜ್ ಮಹಲ್ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್ ನೋಟ್ ದೊರಕಿರ ಪ್ರಕಾರ ಸುಬ್ಬಣ್ಣ ಅವರ ತಮ್ಮ ಸುರೇಶ ಎನ್ನುವವರು ಮಲ್ಪೆ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಇನ್ನು ಸುಬ್ಬಣ್ಣ ಅವರ ಸಾವಿಗೆ ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ ಮೇಲಾಧಿಕಾರಿಯವರ ಅಸಹಕಾರ ಮತ್ತು ರಿಯಾಜ್ ಎಂಬ ವ್ಯಕ್ತಿಯ ಮೋಸದ ನಡವಳಿಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬ್ಯಾಂಕಿನ ಅಧ್ಯಕ್ಷರಾದ ಯಶಪಾಲ್ ಎ ಸುವರ್ಣ, ಎಂ ಡಿ ಜಗದೀಶ್ ಮೊಗವೀರ , ಮಾಜಿ ಎಂಡಿ ಜೆ ಕೆ ಸೀನ ಗಂಗೊಳ್ಳಿ , ಮ್ಯಾನೇಜರ್ ಸಾರಿಕಾ, ಸಾಲಗಾರ ರಿಯಾಜ್ ಇವರುಗಳು ನೀಡಿದ ಮಾನಸಿಕ ಒತ್ತಡ ಕಿರುಕುಳ ಹಾಗೂ ಬ್ಯಾಂಕಿನ ಆಡಳಿತ ಮಂಡಳಿ ಸಾಲ ವಸೂಲಾತಿಯನ್ನು ಮಾಡಿ ಕೊಡದಿದ್ದರೆ ನಿನ್ನ ಮನೆಯನ್ನಾದರೂ ಮಾರಿ ಬ್ಯಾಂಕಿನ ಸಾಲ ತೀರಿಸಬಬೇಕೆಂದು ಇಲ್ಲದಿದ್ದರೆ ನಿನ್ನ ಜೀವ ತೆಗೆಯುವುದಾಗಿ ಬೆದರಿಸಿರುತ್ತಾರೆ, ಸುಬ್ಬಣ್ಣ ಇವರ ಸಾವಿನಲ್ಲಿ ಸಂಶಯವಿದ್ದು ಆದ್ದರಿಂದ ಆಡಳಿತ ಮಂಡಳಿ ಮತ್ತು ಸಾಲಗಾರ ರಿಯಾಜ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ದೂರು ನೀಡಲಾಗಿದೆ.
ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 23/2022 ಕಲಂ:306 ಐ.ಪಿ.ಸಿ 3(2)(v) sc/st act ರಂತೆ ಪ್ರಕರಣ ದಾಖಲಿಸಲಾಗಿದೆ.