ಮಂಗಳೂರು, ಮಾ 11 (DaijiworldNews/DB): ದಿನದ 24 ತಾಸು ಒತ್ತಡದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು ಅದರಲ್ಲೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಒತ್ತಡ ಕಡಿಮೆ ಮಾಡಿ ಅವರಲ್ಲಿ ಉತ್ಸಾಹ ತುಂಬಲು ಕ್ರೀಡಾಕೂಟಗಳು ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಚ್ 11ರ ಶನಿವಾರ ನಗರದ ಮಂಗಳ ಕ್ರೀಡಾಂಗಣದಲ್ಲಿ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ನೌಕರರು ದಿನದ 24 ಗಂಟೆಯೂ ಒತ್ತಡದಲ್ಲಿರುತ್ತಾರೆ. ಕಚೇರಿ ಅಥವಾ ಮನೆಯಲ್ಲಿ ಒತ್ತಡದಿಂದ ಇರುವ ಅವರು, ಒಟ್ಟಿಗೆ ಸೇರಿ ಒಂದು ದಿನವಾದರೂ ಒತ್ತಡದಿಂದ ಪಾರಾಗಿ ಅವರಿಗೆ ಆಸಕ್ತಿ ಇರುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕ್ರೀಡಾಕೂಟವನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ತಿಳಿಸಲಾಗಿತ್ತು, ಅದರಂತೆ ಅವರಲ್ಲೂ ಕೂಡ ಈ ಚಿಂತನೆ ಮೊಳಕೆಯೊಡೆದಿದ್ದ ಪರಿಣಾಮ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂದರು.
ಗ್ರಾಮ ಪಂಚಾಯತ್ ಮಟ್ಟದಿಂದ ಹಿಡಿದೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಅದೇ ರೀತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಬಗ್ಗೆಯೂ ಚಿಂತನೆ ಮೂಡಿದ್ದು, ಸೂಕ್ತ ರೂಪುರೇಷೆಗಳನ್ನು ನೀಡಿ ಮುಂದಿನ ವರ್ಷ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿ ವರ್ಷ ಜಿಲ್ಲೆಯಲ್ಲಿ ಈ ರೀತಿಯ ಕ್ರೀಡಾಕೂಟವನ್ನು ಹಮ್ಮಿಕೊಳ್ಳಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿ, ಸಿಬ್ಬಂದಿಗಳು ಇದರಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ನೌಕರರಿಗೆ ಈ ರೀತಿಯ ಕ್ರೀಡಾಕೂಟ ಹಮ್ಮಿಕೊಳ್ಳುವ ಚಿಂತನೆ ಇತ್ತು. ಅದಕ್ಕೆ ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿಯವರಿಂದ ಪ್ರೋತ್ಸಾಹ ದೊರೆತ ಕಾರಣ ಈ ರೀತಿಯ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಬದುಕು ಬಹಳ ಅಮೂಲ್ಯ. ದೇವರು ಕೊಟ್ಟ ಕಾಣಿಕೆ. ಅದನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಎಂಬುದನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಕೆಲಸದ ನಡುವೆ ದೈಹಿಕ ಶ್ರಮಕ್ಕೆ ಒಂದು ಗಂಟೆಯನ್ನು ದಿನದಲ್ಲಿ ಮೀಸಲಿಡಬೇಕು. ಒಂದು ಗಂಟೆ ಯೋಗ, ವ್ಯಾಯಾಮ ಮತ್ತು ಧ್ಯಾನದಲ್ಲಿ ಕಳೆದರೆ ದಿನ ಪೂರ್ತಿ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಹೇಳಿದರು.
ನಮಗೆಲ್ಲರಿಗೂ ಹೆಲ್ತ್ ಇನ್ಸೂರೆನ್ಸ್ ಅತೀ ಮುಖ್ಯ. ಆದರೆ, ಗ್ಯಾರಂಟಿ ಇಲ್ಲ. ಹೆಲ್ತ್ ಪಾಲಿಸಿಗಿಂತ, ಹೆಲ್ತ್ ಇನ್ಸೂರೆನ್ಸ್ ಗಿಂತ ಆರೋಗ್ಯಕರ ಸದೃಢ ಮನಸ್ಸು ಮುಖ್ಯ. ನಾವು ಚೆನ್ನಾಗಿ ಕೆಲಸ ಮಾಡಬೇಕು ಎಂದಾದರೆ ನಮ್ಮ ಅಭಿರುಚಿಗಳು ಚೆನ್ನಾಗಿರಬೇಕು. ರುಚಿ ಮತ್ತು ಅಭಿರುಚಿಗೆ ಎರಡೇ ಅಕ್ಷರ ವ್ಯತ್ಯಾಸ. ಹಾಗಾಗಿ ಒಳ್ಳೆಯ ಅಭಿರುಚಿಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಲ್ಲರಿಗೂ ಇದರಿಂದ ಉತ್ತಮ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ ಆಗಲಿ ಎಂದರು.
ಶಾಸಕ ಯು.ಟಿ. ಖಾದರ್ ಭಾಗವಹಿಸಿದ್ದರು. ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ದಯಾವತಿ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ, ವೈದ್ಯ ಕಿರಣ ಉಪಸ್ಥಿತರಿದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ. ನಾಯಕ್ ಸ್ವಾಗತಿಸಿದರು. ಜಗದೀಶ್ ಪ್ರಾರ್ಥಿಸಿದರು.