ಕುಂದಾಪುರ,ಮಾ 19 (MSP): ಅನಾದಿ ಕಾಲದಿಂದ ನಡೆದು ಬರುತ್ತಿರುವ ಹೋಳಿ ಹಬ್ಬದ ವಿಜೃಂಭಣೆಯ ಆಚರಣೆಗೆ ಈ ಬಾರಿ ಚುನಾವಣಾ ನಿತಿ ಸಂಹಿತೆ ಅಡ್ಡಿಯಾಗಿದೆ. ಕರಾವಳಿಯಲ್ಲಿ ಖಾರ್ವಿ ಸಮಾಜದ ಯುವಕರು, ಯುವತಿಯರು ಹಾಗೂ ಸಮಾಜ ಒಟ್ಟಾಗಿ ಆಚರಿಸುವ ವಿಶಿಷ್ಟ ಕಾಮನ ಹಬ್ಬ ಹೋಳಿ ಆಚರಣೆ ಈ ಬಾರಿ ನೀರಸವಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಈ ಬಗ್ಗೆ ವಿಜೃಂಭಣೆಯಿಂದ ನಡೆಯುವ ಹೋಳಿ ಮೆರವಣಿಗೆ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಹೋಳಿ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂಬುದಾಗಿ ಖಾರ್ವಿ ಸಮಾಜ ಕಿಡಿಕಾರಿದೆ.
ಶುಕ್ರವಾರದ ತನಕ ನಡೆಯುವ ವಿವಿಧ ಆಚರಣೆಗಳನ್ನು ಒಳಗೊಂಡಿರುವ ಹೋಳಿ ಹಬ್ಬದ ಕೊನೆಯ ದಿನವಾದ ಶುಕ್ರವಾರ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಕಾಮನ ಕೊಂಡೊಯ್ದು ದಹಿಸುವ ಕಾರ್ಯಕ್ರಮವಿದೆ. ಪ್ರತೀ ವರ್ಷವೂ ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಹಬ್ಬದ ಆಚರಣೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ. ಅಲ್ಲದೇ ಇತಿಹಾಸದಲ್ಲಿ ಹಬ್ಬದ ಮೆರವಣಿಗೆಯ ಸಂದರ್ಭ ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಖಾರ್ವಿ ಸಂಘಟನೆಯ ಪ್ರಮುಖರು ಅಧಿಕಾರಿಗಳಿಗೆ ಮನವರಿಕೆ ಮಾಡಲು ಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ಖಾರ್ವಿ ಸಮಾಜದ ಮುಖಂಡರಾದ ಜಯಾನಂದ ಖಾರ್ವಿ ಹಾಗೂ ಚಂದ್ರಶೇಖರ ಖಾರ್ವಿ ಆರೋಪಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲದ ಕಾರಣ ಖಾರ್ವಿಕೇರಿಯ ಖಾರ್ವಿ ಸಮಾಜದ ಮುಖಂಡರು ಸೋಮವಾರ ಸಂಜೆ ತುರ್ತು ಸಭೆ ಕರೆದಿದ್ದರು.
ಸಭೆಯಲ್ಲಿ ಮಾತನಾಡಿದ ಜಯಾನಂದ ಖಾರ್ವಿ, ಚುನಾವಣೆಗೂ ಹೋಳಿ ಹಬ್ಬಕ್ಕೂ ಸಂಬಂಧವಿಲ್ಲ. ಹೋಳಿ ಹಬ್ಬ ಒಂದು ಸಮುದಾಯದ ಹಬ್ಬ. ಸಾಂಪ್ರದಾಯಿಕವಾಗಿ ಖಾವಿ ಸಮಾಜಕ್ಕೆ ಇರುವ ಒಮದೇ ಹಬ್ಬ ಇದಾಗಿರುವುದರಿಂದ ಸಂಪ್ರದಾಯದ ಆಚರಣೆ ಅಡ್ಡಿಪಡಿಸುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಮತ್ತೆ ಅಧಿಕಾರಿಗಳ ಮನವೊಲಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿ, ನಮ್ಮ ಸಮಾಜದ ಹಬ್ಬ ಆಚರಣೆಗೆ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದಾದರೆ ಅಂತಹಾ ಚುನಾವಣೆಯನ್ನೇ ನಮ್ಮ ಸಮಾಜ ಬಹಿಷ್ಕರಿಸುತ್ತದೆ. ಪ್ರಜಾಪ್ರಭುತ್ವದಡಿಯಲ್ಲಿ ಸಂವಿಧಾನ ಬದ್ಧವಾಗಿ ಒಂದು ಸಮಾಜದ, ಸಂಪ್ರದಾಯದ ಆಚರಣೆಗೆ ತಡೆ ತರುವ ಯಾವ ಹಕ್ಕೂ ಯಾರಿಗೂ ಇಲ್ಲ. ಒಂದು ವೇಳೆ ಜನರಿಗಾಗಿ ಇರಬೇಕಾದ ಕಾನೂನು ಕಟ್ಟಳೆಗಳಿಂದ ಒಂದು ಸಮಾಜಕ್ಕೆ ಅನ್ಯಾಯವಾಗುತ್ತದೆಯಾದರೆ ಅದರ ವಿರುದ್ಧ ಚುನಾವಣಾ ಬಹಿಷ್ಕಾರದ ಮೂಲಕ ಹೋರಾಡಬೆಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸಮಾಲೋಚನಾ ಸಭೆಯಲ್ಲಿ ಖಾರ್ವಿಕೇರಿ ಹಾಗೂ ಕುಂದಾಪುರ ಭಾಗದ ಎಲ್ಲಾ ಖಾರ್ವಿ ಸಮಾಜದ ಸದಸ್ಯರು ಭಾಗವಹಿಸಿದ್ದರು.