ಮಂಗಳೂರು, ಮಾ 11 (DaijiworldNews/MS): ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ, ಅದರಲ್ಲಿ ಅರ್ಹ ಮತದಾರರೆಲ್ಲರೂ ನಿಷ್ಪಕ್ಷಪಾತವಾಗಿ, ಸ್ವಯಂಪ್ರೇರಣೆಯಿಂದ ಭಾಗವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಕರೆ ನೀಡಿದರು.
ಅವರು ಮಾ.10 ಶುಕ್ರವಾರ ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಪ್ರಜಾವಾಣಿ ದಿನಪತ್ರಿಕೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವ ಮತದಾರರ ಜಾಗೃತಿ ಸಂವಾದ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಮತದಾನದಲ್ಲಿ ಹಕ್ಕನ್ನು ಚಲಾಯಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯ ಹಾಗೂ ಬೆಲೆ ಹೆಚ್ಚಾಗುತ್ತದೆ, ನಗರದ ಪ್ರದೇಶದಲ್ಲಿ ಮತದಾನದ ಪ್ರಮಾಣ ಗ್ರಾಮೀಣಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಸುಳ್ಯ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಶೇ.80ಕ್ಕೂ ಹೆಚ್ಚು ಮತದಾನವಾಗಿದ್ದರೆ, ಮಂಗಳೂರು ನಗರದಲ್ಲಿ ಶೇ. 67ರಷ್ಟು ಮಂದಿ ಮತ ಚಲಾಯಿಸಿದ್ದರು, ಬುದ್ಧಿವಂತರು ಹೆಚ್ಚು ಎನ್ನುವ ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ, ಆ ನಿಟ್ಟಿನಲ್ಲಿ ನಗರ ಪ್ರದೇಶಗಳ ಯುವ ಜನಾಂಗ ಕಡ್ಡಾಯವಾಗಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಈ ಮೂಲಕ ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಸಬೇಕು, ಯಾವುದೇ ಬದಲಾವಣೆ ಯುವಶಕ್ತಿಯಿಂದ ಮಾತ್ರ ಸಾಧ್ಯ ಅದು ದೇಶದ ಅತಿ ದೊಡ್ಡ ಸಂಪತ್ತಾಗಿದೆ ಆದಕಾರಣ ಅಭಿವೃದ್ಧಿಗೆ ದೇಶದ ಏಳಿಗೆಗೆ ಕಾರಣವಾಗುವ ಸರ್ಕಾರಗಳನ್ನು ಚುನಾಯಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ನಮ್ಮ ಚುನಾವಣೆ - ನಮ್ಮ ಹೆಮ್ಮೆ, ನಮ್ಮ ಗೌರವ ಎಂಬುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಚುನಾವಣೆಯ ಪ್ರಾಮುಖ್ಯ ಅರಿಯಬೇಕು, ಅನ್ನದಾನ, ರಕ್ತದಾನದಂತೆ ಶ್ರೇಷ್ಠದಾನ ಮತದಾನ, ಜಿಲ್ಲೆಯಲ್ಲಿ 17.52 ಲಕ್ಷ ಮತದಾರರಿದ್ದು, ಈ ಪೈಕಿ 35 ಸಾವಿರಕ್ಕೂ ಅಧಿಕ ಯುವ ಮತದಾರರಿದ್ದಾರೆ ಅವರೆಲ್ಲರೂ ಈ ಬಾರಿ ಚುನಾವಣೆಯಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವಂತೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಅವರು ಮಾತನಾಡಿ ಸಮರ್ಥ ನಾಯಕ ಅರ್ಹ ಸರ್ಕಾರವನ್ನು ಆಯ್ಕೆ ಮಾಡಲು ಯಾವುದೇ ಆಮಿಷಕ್ಕೆ ಒಳಗಾಗದೆ ಮತವನ್ನು ಚಲಾಯಿಸಬೇಕು, ಈ ನಿಟ್ಟಿನಲ್ಲಿ ಮತದಾರರು ಸಕಾರಾತ್ಮಕವಾಗಿ ಯೋಚನೆ ವiಡಬೇಕು, ಚುನಾವಣಾ ಆಯೋಗ ಮುಕ್ತ ಹಾಗೂ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರು 17.52 ಲಕ್ಷ ಮತದಾರರು ಮತದಾನ ಮಾಡುವಂತೆ ಕರೆ ನೀಡಿದರು.5
ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ, ಮತದಾರರ ನೋಂದಣಾಧಿಕಾರಿ ರಾಯಪ್ಪ, ಮಾಸ್ಟರ್ ಟ್ರೇನರ್ ಡಾ. ಯತೀಶ್ಕುಮಾರ್, ಸೆಕ್ಟರ್ ಅಧಿಕಾರಿ ರಘುಪತಿ ಕೇಕುಣ್ಣಾಯ ಹಾಗೂ ಗಣೇಶ ಚಂದನ ಶಿವ ವೇದಿಕೆಯಲ್ಲಿದ್ದರು.