ಉಡುಪಿ, ಮಾ 18(SM): ಬೆಂಗಳೂರಿನ ಏರ್ ಶೋ ಸಂದರ್ಭ ನಡೆದ ಅಗ್ನಿ ಅವಘಡದಲ್ಲಿ ಆಹುತಿಯಾದ ಕಾರಿನ ಟ್ಯಾಕ್ಸ್ ರೀಫಂಡ್ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ ಭ್ರಷ್ಟ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರವೇ ಇದೀಗ ಬಯಲಾಗಿದೆ. ಎಸಿಬಿ ದಾಳಿಯಿಂದ ಉಡುಪಿಯಲ್ಲಿ ಸಾರಿಗೆ ಉಪ ಆಯುಕ್ತರಾಗಿದ್ದ ಆರ್.ಎಮ್. ವರ್ಣೇಕರ್ ರ ಮಂಗಳೂರಿನ ಮನೆಯಲ್ಲಿ 70 ಲಕ್ಷ ರೂಪಾಯಿ ನಗದು, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ದಾಖಲೆಗಳು ಪತ್ತೆಯಾಗಿದ್ದು ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಉಡುಪಿಯಲ್ಲಿ ಸಾರಿಗೆ ಉಪ ಆಯುಕ್ತರಾಗಿದ್ದ ಆರ್.ಎಮ್. ವರ್ಣೇಕರ್ ಕಚೇರಿಗೆ ಮಾರ್ಚ್ 16ರಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.ಟ್ಯಾಕ್ಸ್ ರೀಫಂಡ್ ಮಾಡಲು 6,500 ರೂಪಾಯಿಗೆ ಬೇಡಿಕೆ ಇಟ್ಟಿದ್ದ ಅಧಿಕಾರಿ, ಮುಂಗಡವಾಗಿ ಕಾರಿನ ಮಾಲಕನಿಂದ 4 ಸಾವಿರ ರೂಪಾಯಿ ಹಣ ಪಡೆಯಲು ಮುಂದಾಗಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು. ಬಳಿಕ ತನಿಖೆ ಮುಂದುವರೆಸಿದ ಎಸಿಬಿ ಅಧಿಕಾರಿಗಳು ಬಗೆದಷ್ಟು ಅಧಿಕಾರಿಯ ಭ್ರಷ್ಟತನ ಮತ್ತಷ್ಟು ಆಳವಾಗಿದ್ದು ಪತ್ತೆಯಾಗಿದೆ.
ಮಂಗಳೂರಿನಲ್ಲಿರುವ ಅಧಿಕಾರಿಯ ನಿವಾಸಕ್ಕೂ ಹಾಗೂ ಫ್ಲ್ಯಾಟ್ ಗೂ ದಾಳಿ ನಡೆಸಲಾಗಿತ್ತು. ಈ ವೇಳೆ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರವೇ ಬಯಲಾಗಿದೆ. ನಿರಂತರ 20 ಗಂಟೆಗಳ ಕಾರ್ಯಾಚರಣೆಯಿಂದ ಬ್ರಹ್ಮಾಂಡ ಭ್ರಷ್ಟ ಅಧಿಕಾರಿ ಎಸಿಬಿ ಅಧಿಕಾರಿಗಳ ವಶಕ್ಕೆ ಸಿಕ್ಕಿಕೊಂಡಿದ್ದಾರೆ.