ಕಾರ್ಕಳ, ಮಾ 10 (DaijiworldNews/DB): ಮನೆ, ಮನ, ಸಮಾಜದಲ್ಲಿ ಸ್ತ್ರೀಯರ ಪಾತ್ರ ಮಹತ್ವದಾಗಿದೆ. ದೇಶದ ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿದ ಹಕ್ಕು, ಸ್ಥಾನಮಾನಗಳಿಂದಾಗಿ ಸಮಾಜದಲ್ಲಿ ಬಹಳಷ್ಟು ಬದಲಾವಣೆಗೆ ಕಾರಣವಾಗಿದೆ ಎಂದು ಕಾರ್ಕಳ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಹಾಗೂ ಕಾರ್ಕಳ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ರೂಪಾಶ್ರೀ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟೀಯ ಕಾನೂನು ಸೇವೆಗಳ ಪ್ರಾಧಿಕಾರ ನವದೆಹಲಿ, ರಾಷ್ಟೀಯ ಮಹಿಳಾ ಆಯೋಗ ಭಾರತ ಸರ್ಕಾರ ಕರ್ನಾಟಕ ರಾಜ್ಯ, ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯಾವಾದಿಗಳ ಸಂಘ ಕಾರ್ಕಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾರ್ಕಳ ಮಹಿಳಾ ಮಂಡಳಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕಾರ್ಕಳದ ಸ್ತ್ರೀಶಕ್ತಿ ಸಭಾ ಭವನದಲ್ಲಿ ಆಯೋಜಿಸಿದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಉಚಿತ ಕಾನೂನು ಅರಿವು ಮೂಡಿಸಿ ಅವರು ಮಾತನಾಡಿದರು.
ಹಿಂದೆಲ್ಲ ಹೆಣ್ಣು ನಾಲ್ಕು ಗೋಡೆಯೊಳಗೆ ಇರಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕು ಆಕೆಗೆ ಇರುತ್ತಿರಲಿಲ್ಲ. ಅದೇ ಕಾರಣದಿಂದ ಸಮಾಜದಲ್ಲಿ ಹಲವು ಅನಿಷ್ಠ ಪದ್ಧತಿಗಳು, ಸ್ತ್ರೀ -ಪುರುಷರೆಂಬ ತಾರತಮ್ಯವು ಜೀವಂತವಾಗಿರಲು ಕಾರಣವಾಗಿತ್ತು. ದೇಶದ ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿದ ಹಕ್ಕು, ಸ್ಥಾನಮಾನಗಳಿಂದಾಗಿ ಸಮಾಜದಲ್ಲಿ ಬಹಳಷ್ಟು ಬದಲಾವಣೆಗೆ ಕಾರಣವಾಗಿದ್ದು, ಇದರ ಫಲವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಗುರುತಿಸಿ ಸಾಧನೆಗೆ ಕಾರಣರಾಗಿದ್ದಾರೆ ಎಂದರು.
ಕಾರ್ಕಳ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್ಎಫ್ ಚೇತನಾ ಮಾತನಾಡಿ, ಕೌಟುಂಬಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ತಲೆದೋರಿದರೆ ಮಾತುಕತೆಗಳ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಅದನ್ನು ಹೊರತುಪಡಿಸಿ ಕಾನೂನು ಚೌಕಟ್ಟಿನ ನೆಪದಲ್ಲಿ ನ್ಯಾಯಾಲಯದ ಮೆಟ್ಟಲೇರುವುದು ಸಮಂಜಸವಲ್ಲ. ಸಣ್ಣಪುಟ್ಟ ಸಮಸ್ಯೆಯೂ ದೀರ್ಘಕಾಲಿಕವಾಗಿ ಮಾರ್ಪಟ್ಟು ಜೀವನ ಬಹುಕಾಲ ವ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ. ಕಾನೂನು ರಕ್ಷಣೆಗೆ ಹೊರತು ಒನ್ನೊಬ್ಬರ ಬದುಕಿಗೆ ಚೆಲ್ಲಾಟದ ಅಸ್ತ್ರ ವಾಗಬಾರದು ಎಂದರು.
ನ್ಯಾಯಾವಾದಿ ಸಂಘದ ಅಧ್ಯಕ್ಷ ಸುನೀಲ್ಕುಮಾರ್ ಶೆಟ್ಟಿ ಮಾತನಾಡಿ, ಸಂವಿಧಾನವು ಮಹಿಳೆಯರಿಗೆ ವಿಶೇಷ ತರದಲ್ಲಿ ಹಕ್ಕುಗಳನ್ನು ನೀಡಿದೆ. ದೇಶದ ಪ್ರಥಮ ಪ್ರಜೆಯ ಕುರಿತು ಉಲ್ಲೇಖಿಸಿದ ಅವರು ಮಹಿಳೆಯರೇ ದೇಶದ ಆಡಳಿತ ಚುಕ್ಕಾಣಿ ಹಿಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಇದಕ್ಕೆ ಪೂರಕವಾಗಿ ಕಾರ್ಕಳ ನ್ಯಾಯಾಲಯದ ಮೂರು ವಿಭಾಗಗಳಲ್ಲಿ ಮೂವರು ಮಹಿಳೆಯರೇ ನ್ಯಾಯಾಧೀಶರಾಗಿದ್ದಾರೆ. ಕಾನೂನು ಅಸ್ತ್ರ ವಾಗಿ ಉಪಯೋಗ ಮಾಡುವುದು ಸಮಾಜಕ್ಕೆ ಮಾರಕ ಎಂದು ಹೇಳಿದರು.
2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕೋಮಲಾ ಆರ್.ಸಿ. ಸಂಪನ್ಮೂಲ ವ್ಯಕ್ತಗಳಾಗಿದ್ದರು. ಪ್ಯಾನಲ್ ವಕೀಲೆ ಮುಕ್ತಾ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಯಶೋಧಾ ಶೆಟ್ಟಿ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಸ್ತಾವಿಕವಾಗಿ ಮಾತನಾಡಿದರು.