ಬಂಟ್ವಾಳ, ಮಾ. 09 (DaijiworldNews/SM): ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ವ್ಯಕ್ತಿಯ ಆಟೋ ರಿಕ್ಷಾವನ್ನೇ ಹಾಡು ಹಗಲೇ ಕಳ್ಳರು ಕದ್ದೊಯ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದ ಬಿ.ಸಿ.ರೋಡಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಕಚೇರಿ ಮುಂಭಾಗ 400ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ರೈತಸಂಘ ಆಯೋಜಿಸಿದ್ದ ಪ್ರತಿಭಟನೆಗೆ ಬಂದ ವೇಳೆ ಬಿ.ಸಿ.ರೋಡಿನ ರೋಟರಿ ಕ್ಲಬ್ -ಲಯನ್ಸ್ ಭವನದ ಬಳಿ ನಿಲ್ಲಿಸಿದ್ದ ಆಟೊವನ್ನೇ ಕಳವು ಮಾಡಲಾಗಿದೆ.
ಬೆಳಗ್ಗೆ 10.30ರ ವೇಳೆ ಬಿ ಸಿ ರೋಡಿನ ಲಯನ್ಸ್ ಕ್ಲಬ್ ಭವನದ ಹತ್ತಿರ ತಮ್ಮ ಅಟೋ ರಿಕ್ಷಾವನ್ನು ನಿಲ್ಲಿಸಿ, ರೈತರ ಪ್ರತಿಭಟನೆಗೆ ತೆರಳಿದ್ದಾರೆ. ಪ್ರತಿಭಟನೆ ಮುಗಿದ ನಂತರ ಮಧ್ಯಾಹ್ನ 3.00 ಗಂಟೆಗೆ ಪುನಃ ಅಲ್ಲಿಗೆ ಹೋಗಿ ನೋಡಲಾಗಿ ಅಟೋ ರಿಕ್ಷಾ ನಿಲ್ಲಿಸಿದಲ್ಲಿ ಇರದೇ ಇದ್ದು, ಅಲ್ಲೆ ಸುತ್ತ ಮುತ್ತ ಹುಡುಕಲಾಗಿ ಸಿಗದೇ ಇದ್ದು ಯಾರೋ ಕಳ್ಳರು ಅಟೋ ರಿಕ್ಷಾ ಕಳವು ಮಾಡಿಕೊಂಡು ಹೋಗಿದ್ದಾಗಿ ಸಂಶಯಿಸಲಾಗಿದೆ. ಈ ಕುರಿತು ವಿಟ್ಲದ ಯೋಗೀಶ್ ಕುಮಾರ್ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.