ಮಂಗಳೂರು, ಮಾ 18(SM): ಲಾಡ್ಜ್ ಗೆ ದಾಳಿ ನಡೆಸಿದ ಮಂಗಳೂರು ಉತ್ತರ ಠಾಣಾ ಪೊಲೀಸರು ಓರ್ವನನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿರುವ ಘಟನೆ ನಡೆದಿದೆ. ರಾವ್ & ರಾವ್ ಸರ್ಕಲ್ ನ ಬಳಿ ಇರುವ ದರ್ಬಾರ್ ಲಾಡ್ಜ್ ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಸಂದರ್ಭ ಲಾಡ್ಜ್ ನ ಮಾಲೀಕನಾದ ಸುಭಾಶ್ಚಂದ್ರ ಹೆಗ್ಡೆ ಎಂಬಾತನ ನಿರ್ದೆಶನದ ಮೇರೆಗೆ ಆತನ ಸಹವರ್ತಿ ರತ್ನಾಕರ ಶೆಟ್ಟಿ ಎಂಬಾತ ಅನೈತಿಕ ಚಟುವಟಿಕೆ ನಡೆಸಲು ಕೊಠಡಿಯನ್ನು ಬಾಡಿಗೆಗೆ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಆರೋಪಿ ರತ್ನಾಕರ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ ಸ್ಥಳದಲ್ಲಿದ್ದ ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಲಾಗಿದ್ದು, ಮಹಿಳಾ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಇನ್ನು ಲಾಡ್ಜ್ ನ ಮಾಲಿಕ ಆರೋಪಿ ಸುಭಾಶ್ಚಂದ್ರ ಹೆಗ್ಡೆ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಯಿಂದ ನಗದು ಹಣ, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ದ ಮಂ.ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.