ಬಂಟ್ವಾಳ, ಮಾ 09 (DaijiworldNews/MS): ಬಿಹಾರದ ಪಟ್ನಾದ ಫುಲ್ವಾರಿ ಷರೀಫ್ನಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಮಾರ್ಚ್ 5 ರಂದು ನಂದಾವರ ಬಂಟ್ವಾಳ, ಪುತ್ತೂರು ಮತ್ತು ಮಂಜೇಶ್ವರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯಿಂದ ಬಂಧಿಸಲ್ಪಟ್ಟ ಐವರು ಈಗ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದವರು ಮತ್ತು ಇವರು ಉಗ್ರರಿಗೆ 25 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಇದು ಪಿಎಫ್ಐ ಭಯೋತ್ಪಾದಕ ಚಟುವಟಿಕೆಗಳ ಅಂತರಾಜ್ಯ ಹವಾಲಾ ಜಾಲವಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಪಿಎಫ್ಐ ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿರುವ ಕುರಿತು ಎನ್ಐಎ ಅಧಿಕಾರಿಗಳು ದಾಖಲೆ ಸಹಿತ ಪತ್ತೆಹಚ್ಚಿದ್ದಾರೆ.ಪಾಣೆಮಂಗಳೂರಿನ ನಂದಾವರ ನಿವಾಸಿಗಳಾದ ಮೊಹಮ್ಮದ್ ಸಿನಾನ್ ಮತ್ತು ಇಕ್ಬಾಲ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಪುತ್ತೂರಿನ ಅಬ್ದುಲ್ ರಫೀಕ್ ಮತ್ತು ಮಂಜೇಶ್ವರದ ಕುಂಜತ್ತೂರಿನ ಅಬೀದ್ ಎಂಬುವರನ್ನು ಸೇರಿ ಎನ್ಐಎ ಪೊಲೀಸರು ಬಂಧಿಸಿ ಪಟ್ನಾಕ್ಕೆ ಕರೆದೊಯ್ದಿದ್ದಾರೆ.
ಕೇರಳ, ಕರ್ನಾಟಕ ಮತ್ತು ಬಿಹಾರ ಮೊದಲಾದ ರಾಜ್ಯದಲ್ಲಿ ಪಿಎಫ್ಐ ಹವಾಲಾ ದಂಧೆ ನಡೆಸುತ್ತಿದ್ದು ಫುಲ್ವಾರಿ ಷರೀಫ್ ಪ್ರಕರಣದ ತನಿಖೆ ವೇಳೆ ಇದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಗಳಾದ ಮೊಹಮ್ಮದ್ ಸಿನಾನ್ ಮತ್ತು ಸರ್ಫ್ರಾಜ್ ನವಾಜ್ ಇಬ್ಬರು ವಿದೇಶಗಳಿಂದ ಬರುತ್ತಿದ್ದ ಹಣವನ್ನು ಪಿಎಫ್ಐ ಸಂಘಟನೆ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಹಂಚುವ ಜವಾಬ್ದಾರಿ ವಹಿಸಿಕೊಂಡಿದ್ದರು
ಬಿಹಾರದ ಫುಲ್ವಾರಿ ಷರೀಫ್ ಮತ್ತು ಮೋತಿಹಾರಿ ಪ್ರದೇಶಗಳಲ್ಲಿ ಪಿಎಫ್ಐ ಕಾರ್ಯಕರ್ತರು ತಮ್ಮ ರಹಸ್ಯ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದ, ಪೂರ್ವ ಚಂಪಾರಣ್ ಜಿಲ್ಲೆಯ ನಿರ್ದಿಷ್ಟ ಸಮುದಾಯದ ಯುವಕರನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ರೈಫಲ್ಗಳು ಮತ್ತು ಬುಲೆಟ್ಗಳನ್ನು ಸಿದ್ದಪಡಿಸಿಟ್ಟುಕೊಂಡಿದ್ದರು. ಈ ವಿಚಾರವಾಗಿ ಮೂವರನ್ನು ಬಂಧಿಸಲಾಗಿತ್ತು. ಇವರು ಕೆಲವೊಂದು ಶಂಕಿತ ಉಗ್ರರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುತ್ತಿದ್ದರು ಎಂದು ಎನ್ಐಎ ತಿಳಿಸಿದೆ. ಅವರನ್ನು ಪಾಟ್ನಾದ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.