ಮಂಗಳೂರು,ಮಾ 09 (DaijiworldNews/MS): ರಾಜ್ಯದಲ್ಲಿ ಬೇಸಿಗೆಯ ಬಿಸಿಲು ಏರಿಕೆಯಾಗುತ್ತಿದ್ದು, ಕರಾವಳಿ ಭಾಗದಲ್ಲಿ ಮತ್ತೊಮ್ಮೆ ತಾಪಮಾನ ದೇಶದಲ್ಲೇ ದಾಖಲೆಯ ಮಟ್ಟಕ್ಕೆ ತಲುಪಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 38.8 ಡಿ.ಸೆ. ದಾಖಲಾಗಿದ್ದು ಇದು ದೇಶದಲ್ಲಿಯೇ ಗರಿಷ್ಟ ತಾಪಮಾನವಾಗಿದೆ.
ಈ ಬಾರಿ ಬೇಸಿಗೆಯು ವಾಡಿಕೆಗಿಂತ ಮೊದಲೇ ಪ್ರಾರಂಭವಾಗಿದೆ. ಇನ್ನು ಮಾರ್ಚ್ ಎರಡನೇ ವಾರದಿಂದ ಬಿಸಿಲ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಕೆಲವು ಕಡೆ ಸಾಮಾನ್ಯಕ್ಕಿಂತ 3 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ.
ಒಣಹವೆ ಹಾಗೂ ಉತ್ತರದಿಂದ ದಕ್ಷಿಣಕ್ಕೆ ಬೀಸುತ್ತಿರುವ ಗಾಳಿಯಿಂದ ರಾಜ್ಯದಲ್ಲಿ ತಾಪಮಾನ ಒಂದೇ ಸಮನೆ ಏರಿಕೆ ಕಾಣುತ್ತಿದೆ. ತೇವಾಂಶ ಕಡಿಮೆಯಾಗಿ ಮೋಡದ ವಾತಾವರಣ ಇಲ್ಲದಿರುವ ಪರಿಣಾಮ ಸುಡು ಬಿಸಿಲಿನ ಅನುಭವ್ವಾಗುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾಗಿ ತೇವಾಂಶ ಕಡಿಮೆಯಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲ ತಾಪ ಗಣನೀಯವಾಗಿ ಏರಿಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.