ಉಡುಪಿ, ಮಾ 08 (DaijiworldNews/MS): ಉಡುಪಿಯಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ಮಠ ನಿರ್ಮಾಣಕ್ಕೆ ಮುಸ್ಲಿಂ ರಾಜರೊಬ್ಬರು ಜಾಗ ನೀಡಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಹೇಳಿಕೆಗೆ ತಿರುಗೇಟು ನೀಡಿರುವಉಡುಪಿ ಶಾಸಕ ಕೆ ರಘುಪತಿ ಭಟ್ "ಮಿಥುನ್ ರೈ ಯಾವ ಮುಸಲ್ಮಾನ ರಾಜನ ಬಗ್ಗೆ ಮಾತನಾಡುತ್ತಾರೋ ನಮಗೆ ತಿಳಿದಿಲ್ಲ,ಮಧ್ವಾಚಾರ್ಯರು 850 ವರ್ಷಗಳ ಹಿಂದೆ ಕೃಷ್ಣಮಠ ಸ್ಥಾಪಿಸಿದ್ದರು" ಎಂದು ಹೇಳಿದ್ದಾರೆ.
"ಮುಸಲ್ಮಾನ ಅರಸರು ಯಾವುದೇ ಜಾಗವನ್ನು ಕೃಷ್ಣಮಠಕ್ಕಾಗಲಿ ಅನಂತೇಶ್ವರ ಕ್ಕಾಗಲಿ ನೀಡಿಲ್ಲ ಎನ್ನುವುದು ಸ್ಪಷ್ಟ. ಅನಂತೇಶ್ವರ ದೇಗುಲಕ್ಕೆ ರಾಮಭೋಜನು ಭೂಮಿ ಕೊಟ್ಟ ಬಗ್ಗೆ ಉಲ್ಲೇಖ ಇದೆ. ಮುಂದೆ ಆ ಭೂಮಿಯೇ ಕೃಷ್ಣ ಮಠಕ್ಕೆಂದು ಬಳಕೆಯಾಗಿದೆ. ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆ. ಸದ್ಯ ಇರುವ ಜಾಮಿಯಾ ಮಸೀದಿ ಕೂಡ ಜಂಗಮರ ಮಠದ ಜಾಗದಲ್ಲಿತ್ತು ಎಂದು ಹೇಳಲಾಗುತ್ತಿದೆ. ಶೋಕಮಾತಾ ಚರ್ಚ್ ಕೃಷ್ಣ ಮಠದವರು ಕೊಟ್ಟ ಲೀಸ್ ಭೂಮಿಯಲ್ಲಿದೆ.ಉಡುಪಿ ಸೌಹಾರ್ದತೆಗೆ ಹೆಸರಾದ ಕ್ಷೇತ್ರವಾಗಿದ್ದುಮುಸಲ್ಮಾನರಿಗೂ ಮಸೀದಿ ಕಟ್ಟಲು ಜಂಗಮರ ಮಠ ಜಾಗ ಕೊಟ್ಟಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಚರ್ಚ್ ಕಟ್ಟಲು ಕೃಷ್ಣಾಪುರ ಮಠ ಭೂಮಿ ಕೊಟ್ಟಿದೆ" ಎಂದು ಹೇಳಿದ್ದಾರೆ.
ಇನ್ನು ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ ಉಲ್ಲೇಖವಿದೆ. ಮಿಥುನ್ ರೈ ಯಾವ ಮುಸಲ್ಮಾನ ರಾಜನ ಬಗ್ಗೆ ಮಾತನಾಡುತ್ತಾರೋ ಗೊತ್ತಿಲ್ಲ. ಮಠದ ಚಿಂತೆ ಬಿಟ್ಟು ಅವರು ಅಯೋಧ್ಯೆಯ ಪರಿಸ್ಥಿತಿ ಬಗ್ಗೆ ಚಿಂತನೆ ಮಾಡಲಿ. ಮಥುರದಲ್ಲಿ ಕೃಷ್ಣ ಮಂದಿರ, ಕಾಶಿ ಬಗ್ಗೆ ದೇಶದ ಜನತೆಗೆ ಗೊತ್ತಿದೆ.ಈಗ ಒಂದೊಂದೇ ಕ್ಷೇತ್ರಗಳು ಮುಕ್ತವಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಮಿಥುನ್ ರೈ ಹೇಳಿದ್ದೇನು?
ಮೂಡಬಿದ್ರೆ ತಾಲೂಕಿನ ಪುತ್ತಿಗೆಯ ನೂರಾನಿ ಮಸೀದಿಯಲ್ಲಿ ನಡೆದ ʻನಮ್ಮೂರ ಮಸೀದಿ ನೋಡ ಬನ್ನಿʼ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ ಅವರು, ಉಡುಪಿಯ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂಬ ಹೇಳಿಕೆ ನೀಡಿದ್ದರು. ಇದು ಆಕ್ರೋಶಕ್ಕೆ ಕಾರಣವಾದಾಗ ಮಿಥುನ್ ರೈ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.
ಹಿಂದೆ ಉಡುಪಿಯ ಹಿರಿಯ ಯತಿಗಳೊಬ್ಬರು ನೀಡಿದ್ದ ಹೇಳಿಕೆಯನ್ನು ಆಧರಿಸಿ ತಾನು ಮಾತನಾಡಿದ್ದಾಗಿ ಸಮರ್ಥಿಸಿದ್ದರು.