ಪುತ್ತೂರು, ಮಾ 08 (DaijiworldNews/HR): ನೆರೆ ಮನೆಗೆ ಹೋಗಿ ಹಿಂದಿರುಗಿ ಬರುವಾಗ ದಾರಿ ತಪ್ಪಿ ನಾಪತ್ತೆಯಾಗಿ ಕಾಡು ಸೇರಿದ್ದ ವೃದ್ಧೆಯೋರ್ವರು ಮೂರು ದಿನಗಳ ಬಳಿಕ ಮತ್ತೆ ಮನೆ ಸೇರಿದ ಘಟನೆ ನಡೆದಿದೆ.
ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ (80)ಅವರು ಮನೆಯಿಂದ ಸುಮಾರು 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.
ಇನ್ನು ಈ ವೃದ್ದೆಯು ಮೂರು ರಾತ್ರಿ ಹಾಗೂ ಎರಡು ಹಗಲು ಕಾಡಿನಲ್ಲಿದ್ದ ಎಲೆಗಳನ್ನೇ ತಿಂದು ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ಐಸಮ್ಮ ಅವರು ಸ್ವಲ್ಪ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ವಯೋ ಸಹಜವಾಗಿ ಮಾತನಾಡುವುದು ಕಡಿಮೆಯಾಗಿತ್ತು. ಆದರೆ ತಮ್ಮ ನೆರೆಯ ಮನೆಗಳಿಗೆ ದಿನಾಲೂ ಭೇಟಿ ನೀಡಿ ಅವರೊಂದಿಗೆ ಬೆರೆತು ರಾತ್ರಿಯಾಗುತ್ತಲೇ ತಮ್ಮ ಮನೆ ಸೇರುತ್ತಿದ್ದರು. ಎಂದಿನಂತೆ ಫೆ.28ರಂದು ಸಂಜೆ ಮನೆಯಿಂದ ಹೊರಟವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಐಸಮ್ಮ ಅವರು ಮನೆಗೆ ಹಿಂದಿರುಗದೇ ಇದ್ದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್ ನೆರೆ ಮನೆಗಳಲ್ಲಿ, ವಿಚಾರಿಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಇನ್ನು ಮಾ.3ರಂದು ಬೆಳಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ಶಿಜು ಅವರಿಗೆ ಮಣ್ಣಗುಂಡಿ ಸಮೀಪದ ಏರ್ತಿಲ ರಕ್ಷಿತಾರಣ್ಯದಲ್ಲಿ ವೃದ್ಧೆಯೋರ್ವರು ಅಲೆದಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಾಹಿತಿ ಹರಡಿ ಹುಡುಕಾಡಿದಾಗ ನಾಪತ್ತೆಯಾಗಿದ್ದ ಐಸಮ್ಮರವರು ಕಂಡು ಬಂದಿದ್ದು ಅವರನ್ನು ಬಳಿಕ ಮನೆಗೆ ಕರೆದುಕೊಂಡು ಬಂದಿದ್ದಾರೆ.