ಮಂಗಳೂರು, ಮಾ 08 (DaijiworldNews/MS): ಕರಾವಳಿಯಲ್ಲಿ ಬಿಸಿಲಿನ ಝಳ ಮುಂದುವರಿದಿದೆ. ಜಿಲ್ಲೆಯಲ್ಲಿ ದಿನವಿಡೀ ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಂಗಳೂರಿನಲ್ಲಿ ಗರಿಷ್ಟ 23.1 ಡಿಗ್ರಿ ದಾಖಲಾಗಿದೆ. ಕನಿಷ್ಟ 21.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು ಸಾಮಾನ್ಯ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಇದೇ ರೀತಿಯ ತಾಪಮಾನ ಈ ವಾರ ಪೂರ್ತಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.
ಇದಲ್ಲದೆ ಮಾರ್ಚ್ 8ರಂದು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
ಬಿಸಿ ಗಾಳಿಯ ಹಿನ್ನೆಲೆಯಲ್ಲಿ ಮಾರ್ಚ್ 08 ರಂದು ರಾತ್ರಿವರೆಗೆ ಸಮುದ್ರ ತೀರದಲ್ಲಿ 1.5 ಮೀಟರ್ ನಿಂದ 2.3 ಮೀಟರ್ ವರೆಗೆ ಅಲೆಗಳ ಅಬ್ಬರ ಇರುವ ನಿರೀಕ್ಷೆ ಇದೆ.