ಬಂಟ್ವಾಳ, ಮಾ 07 (DaijiworldNews/HR): ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಈ 81 ವರ್ಷ ಪ್ರಾಯದ ವೃದ್ಧನ ಸನ್ನಡತೆ, ಪ್ರಾಮಾಣಿಕತೆ ಪರಿಗಣಿಸಿರುವ ಕೋರ್ಟ್ ಜೈಲು ಶಿಕ್ಷೆಯ ಬದಲು ಅಂಗನವಾಡಿಯಲ್ಲಿ ಸೇವೆ ಮಾಡಲು ಕಳುಹಿಸಿರುವ ಘಟನೆಯೊಂದು ವರದಿಯಾಗಿದೆ.
ಕರೋಪಾಡಿ ಗ್ರಾಮದ ನಿವಾಸಿ ಐತಪ್ಪ ನಾಯ್ಕ ಶಿಕ್ಷೆಗೊಳಗಾದ ವ್ಯಕ್ತಿ.
ಇನ್ನು ಐತಪ್ಪ ನಾಯ್ಕ ಅವರದ್ದು ಕಡು ಬಡ ಕುಟುಂಬ. 2008ರಲ್ಲಿ ಜಾಗದ ವಿಚಾರದ ಹಿನ್ನೆಲೆಯಲ್ಲಿ ನೆರೆಮನೆಯ ವ್ಯಕ್ತಿಯೊಬ್ಬರಿಗೆ ಐತಪ್ಪ ನಾಯ್ಕ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬಂಟ್ವಾಳದ ಕೋರ್ಟ್ ಆರೋಪಿ ಐತಪ್ಪ ನಾಯ್ಕರಿಗೆ ಮೂರು ದಿನಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿತ್ತು. ಆದರೆ, ದೂರುದಾರ ವ್ಯಕ್ತಿ ಆರೋಪಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸಬೇಕೆಂದು ಮಂಗಳೂರಿನ ಕೋರ್ಟ್ ಮೆಟ್ಟಿಲು ಹತ್ತಿದ್ದರು. ವಿಚಾರಣೆ ನಡೆಸಿದ ಕೋರ್ಟ್ 2014ರಲ್ಲಿ ಆರೋಪಿ ಐತಪ್ಪ ನಾಯ್ಕನಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿತ್ತು.
ಮಂಗಳೂರಿನ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಐತಪ್ಪ ನಾಯ್ಕ ಪರ ವಕೀಲರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಕ್ಕಳಿಲ್ಲದ ವೃದ್ಧ ಮತ್ತು ಮನೆಯಲ್ಲಿ ಪತ್ನಿ ಒಬ್ಬಂಟಿಯಾಗಿರುವುದರಿಂದ ವಯಸ್ಸನ್ನು ನೋಡಿ ಶಿಕ್ಷೆಗೆ ವಿನಾಯ್ತಿ ನೀಡಬೇಕೆಂದು ವಕೀಲರು ಕೋರಿದ್ದರು. ಆರೋಪಿ ಐತಪ್ಪ ನಾಯ್ಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ಪಶ್ಚಾತ್ತಾಪ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಕೆಳಗಿನ ಕೋರ್ಟಿನ ಶಿಕ್ಷೆಯನ್ನು ರದ್ದುಗೊಳಿಸಿದ್ದು, ಅದರ ಬದಲಿ ಒಂದು ವರ್ಷಗಳ ಕಾಲ ಸ್ಥಳೀಯ ಅಂಗನವಾಡಿಯಲ್ಲಿ ವೇತನ ಇಲ್ಲದೇ ಸೇವೆ ಸಲ್ಲಿಸುವಂತೆ ಆದೇಶ ಹೊರಡಿಸಿದ್ದರು.
ಇನ್ನು ಅದರಂತೆ ಕರೋಪಾಡಿ ಗ್ರಾಮದ ಅಂಗನವಾಡಿಯಲ್ಲಿ ವೃದ್ಧ ಐತಪ್ಪ ನಾಯ್ಕ ಸದ್ಯ ಶುಚಿತ್ವದ ಕೆಲಸ ಆರಂಭಿಸಿದ್ದಾರೆ.