ಮಂಗಳೂರು, ಮಾ. 06 (DaijiworldNews/SM): ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿಯವರಿಗೆ ಬಿಜೆಪಿ ವತಿಯಿಂದ ಆಟೋ ಹಾಗೂ ಚೆಕ್ ಹಸ್ತಾಂತರ ಮಾಡಲಾಗಿದೆ.
ಇಂದು ಪುರುಷೋತ್ತಮ ಅವರನ್ನು ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಸೇರಿ ಬಿಜೆಪಿ ಮುಖಂಡರು ರಿಕ್ಷಾ ಹಸ್ತಾಂತರ ಕಾರ್ಯದಲ್ಲಿ ಭಾಗವಹಿಸಿದ್ದರು. ಪುರುಷೋತ್ತಮ ಅವರಿಗೆ ನೂತನ ಆಟೋ ರಿಕ್ಷಾ ಮತ್ತು ೫ ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅವರು, ಕಾಂಗ್ರೆಸ್ ಉಗ್ರ ಚಟುವಟಿಕೆಗಳಿಗೆ ಬೆಂಬಲ ಕೊಡುವ ಪಾರ್ಟಿಯಾ? ಸ್ಫೋಟದಲ್ಲಿ ಗಾಯಗೊಂಡ ಪುರುಷೋತ್ತಮ ಪೂಜಾರಿ ಅಮಾಯಕ. ಆದರೆ ಕಾಂಗ್ರೆಸ್ಸಿಗರು NIA ಬಂಧಿಸಿದ ಉಗ್ರನನ್ನೇ ಅಮಾಯಕ ಅಂತಾರೆ. ಉಡುಪಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನನ್ನೇ NIA ಬಂಧಿಸಿದೆ. ಆತನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿದ್ದನ್ನು ನೋಡಿದ್ದೀರಾ? ಭಯೋತ್ಪಾದಕರು ಕಾಂಗ್ರೆಸ್ನಲ್ಲಿ ಇದ್ದಾರೆ ಅನ್ನೋದು ಸ್ಪಷ್ಟ. ಕಾಂಗ್ರೆಸ್ ನೀತಿಯಿಂದ ಭಯೋತ್ಪಾದನಾ ಚಟುವಟಿಕೆ ಹಳ್ಳಿಗೂ ವ್ಯಾಪಿಸಿದೆ ಎಂದು ಹೇಳಿದರು.
ಮಂಗಳೂರಿನ ನಾಗುರಿಯಲ್ಲಿ ನವೆಂಬರ್ 19ರಂದು ಆಟೋದಲ್ಲಿ ಬರುವಾಗ ವ್ಯಕ್ತಿಯೊಬ್ಬ ಕೈ ತೋರಿಸಿ ನಿಲ್ಲಿಸಿ ಪಂಪ್ ವೆಲ್ಗೆ ಬಿಡಲು ತಿಳಿಸಿದ್ದ. ಈ ವೇಳೆ ಆತನ ಬಳಿ ಒಂದು ಬ್ಯಾಗ್ ಇತ್ತು. ಗರೋಡಿ ಬಳಿ ಬರುತ್ತಿದ್ದಂತೆ ದೊಡ್ಡ ಶಬ್ದವಾಗಿತ್ತು. ಈ ವೇಳೆ ರಿಕ್ಷಾದೊಳಗೆ ಹೊಗೆ ತುಂಬಿಕೊಂಡು ಸಂಪೂರ್ಣ ಕತ್ತಲಾದಂತಾಯಿತು. ಮುಂದೆ ರಿಕ್ಷಾ ಚಲಾಯಿಸಲು ಸಾಧ್ಯವಾಗದೆ ಅಲ್ಲಿಯೇ ನಿಲ್ಲಿಸಿದೆ. ಬಳಿಕ ನಮ್ಮಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಪುರುಷೋತ್ತಮ್ ತಿಳಿಸಿದ್ದಾರೆ.