ಮಂಗಳೂರು, ಮಾ 06 (DaijiworldNews/HR): ಮಂಗಳೂರು ಮತ್ತು ಚಿಕ್ಕಮಂಗಳೂರು ಭಾಗದಲ್ಲಿ ದನ ಕಳವು ಮಾಡುತ್ತಿದ್ದ ಅಂತರಾಜ್ಯದ ನಾಟೋರಿಯಸ್ ಗ್ಯಾಂಗ್ ನ ಕಳ್ಳರನ್ನು ಬಜಪೆ ಪೊಲೀಸರು ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತರನ್ನು ಇರ್ಷಾದ (32) ಮತ್ತು ಇರ್ಫಾನ್ @ ಮಲಾರ್ ಇರ್ಪಾನ್(29) ಎಂದು ಗುರುತಿಸಲಾಗಿದ್ದು, ಮದಡ್ಕ ಪಾರೂಕ್ ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.
ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ಆದೇಶದಂತೆ ಇಂದು ಬೆಳಗ್ಗಿನ ಜಾವ ಪಿಎಸ್ಐ ಪೂವಪ್ಪ ರವರು ಸಿಬ್ಬಂದಿಗಳ ಜೊತೆ ಅಡ್ಡೂರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಮಂಗಳೂರು ನಗರ, ದ.ಕ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಾರುಗಳಲ್ಲಿ ಹೋಗಿ ದನಗಳನ್ನು ಕಳವು ಮಾಡುತ್ತಿದ್ದ ಗಂಜಿಮಠದ ನಿವಾಸಿ ಇರ್ಷಾದ್ ಮತ್ತು ಕೇರಳದ ಮಂಜೇಶ್ವರದ ನಿವಾಸಿ ಇರ್ಪಾನ್ ಎಂಬವರನ್ನು ದನ ಕಳವು ಮಾಡಲು ಉಪಯೋಗಿಸಿರುವ ಕಾರು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇವರುಗಳು ಇತ್ತಿಚ್ಚಿಗೆ ವಿಟ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತೂರು ಎಂಬಲ್ಲಿಂದ 6 ದನಗಳನ್ನು ಮತ್ತು 2021 ನೇ ಇಸವಿಯಲ್ಲಿ ಬಡಗ ಎಡಪದವು ದಡ್ಡಿಯಿಂದ 2 ದನಗಳನ್ನು ಕಾರಿನಲ್ಲಿ ಕಳವು ಮಾಡಿರುವ ವಿಚಾರ ಒಪ್ಪಿಕೊಂಡಿರುತ್ತಾರೆ. ತಪ್ಪಿಕೊಂಡಿರುವ ಮದಡ್ಕ ಪಾರೂಕ್ ಎಂಬಾತನ ಪತ್ತೆಯ ಬಗ್ಗೆ ತೀವ್ರ ಕಾರ್ಯಚರಣೆ ನಡೆಸಲಾಗಿದೆ.
ಇನ್ನು ಆರೋಪಿಗಳ ವಿರುದ್ದ ಮಂಗಳೂರು ನಗರದ ಬಜಪೆ, ಕೊಣಾಜೆ, ಕಾವೂರು, ಮೂಡುಬಿದ್ರೆ, ಮಂಗಳೂರು ಉತ್ತರ, ದ.ಕ ಜಿಲ್ಲೆಯ ಪುಂಜಲಕಟ್ಟೆ, ಬಂಟ್ವಾಳ ನಗರ ಮತ್ತು ಚಿಕ್ಕಮಂಗಳೂರು ಜಿಲ್ಲೆಯ ಬನಕಲ್, ಬಸವನಹಳ್ಳಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ದನ ಕಳವು ಮತ್ತು ದರೋಡೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದಲ್ಲಿ ಕಾನೂನು ಸುವೆವಸ್ಥೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ, ಡಿಸಿಪಿ ಅಂಶು ಕುಮಾರ್ (ಕಾ&ಸು) ಮತ್ತು ಶ್ರೀ ದಿನೇಶ್ ಕುಮಾರ (ಅ & ಸಂ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ನೇತೃತ್ವದಲ್ಲಿ ಪಿಎಸ್ಐ ಪೂವಪ್ಪ, ಗುರು ಕಾಂತಿ, ಎಎಸ್ಐ ರಾಮಣ್ಣ ಪೂಜಾರಿ, ಸುಜನ್, ರಶೀದ ಶೇಖ, ರಾಜೇಶ್, ಸಂತೋಷ, ಸುಜನ್, ಸಂಜೀವ ಭಜಂತ್ರಿ, ಬಸವರಾಜ್ ಪಾಟೀಲ್, ಮೋಹನ್, ಉಮೇಶ್ ಮತ್ತು ಕೆಂಚಪ್ಪ ರವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.