ಮಂಗಳೂರು, ಮಾ 05 (DaijiworldNews/DB): ಭಾನುವಾರದಿಂದ (ಮಾ. 5) ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್ಗಳಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಅಲ್ಲದೆ, ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಇಲಾಖೆ ಹಿಂಪಡೆದುಕೊಂಡಿದೆ.
ಕಳೆದೆರಡು ದಿನ ಕರಾವಳಿಯಲ್ಲಿ ಉಷ್ಣ ಅಲೆಯ ಪ್ರಭಾವ ಉಂಟಾಗಿದ್ದ ಹಿನ್ನೆಲೆಯಲ್ಲಿ ತಾಪಮಾನದಲ್ಲಿ ದಿಢೀರ್ ಏರಿಕೆ ಉಂಟಾಗಿತ್ತು. ಆದರೆ ಸಾಮಾನ್ಯವಾಗಿ ಉಂಟಾಗುವ ಹೀಟ್ ವೇವ್ ಇದಲ್ಲ. ತಾಪಮಾನದಲ್ಲಿ ದಿಢೀರ್ ಏರಿಕೆ ಆದ ಪರಿಣಾಮ ಈ ರೀತಿ ಆಗಿದೆ. ಹಾಗಾಗಿ ಈ ಹೀಟ್ ವೇವ್ ಮುಂದುವರಿಯುವುದಿಲ್ಲ. ಭಾನುವಾರದಿಂದ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಉಷ್ನ ಅಲೆಯ ಪ್ರಮಾಣ ಹೆಚ್ಚಿರಲಿದೆ ಎಂದೂ ಹೇಳಿದೆ.
ಉಷ್ಣ ಅಲೆಯಿಂದಾಗಿ ಕರಾವಳಿ ಜಿಲ್ಲೆಗಳ ಶನಿವಾರ ಹೆಚ್ಚಿನ ಉರಿ ಬಿಸಿಲಿನ ವಾತಾವರಣವಿದ್ದದರಿಂದ ಜನ ಬಿಸಿಲಿನ ಖಾರಕ್ಕೆ ಬಳಲಿದ್ದರು. ಸುಳ್ಯ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಮಧ್ಯಾಹ್ನ ವೇಳೆಗೆ ಬಿಸಿಲಿನಿಂದ ಭೂಮಿ ಕಾದ ಕಬ್ಬಿಣದಂತಾಗಿತ್ತು. ಬಸ್ ಸಹಿತ ವಾಹನಗಳಲ್ಲಿ ಮಧ್ಯಾಹ್ನದ ವೇಳೆಗೆ ಸಂಚರಿಸಿದವರಿಗೆ ಶನಿವಾರ ಬಿಸಿ ಗಾಳಿಯ ಅನುಭವ ಉಂಟಾಗಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನ ನೆರಳಿನ ಆಶ್ರಯಕ್ಕಾಗಿ ತಡಕಾಡುವಂತಾಗಿತ್ತು. ಇನ್ನು ಸೀಯಾಳ, ಜ್ಯೂಸ್ಗಳಿಗೆ ಬೇಡಿಕೆ ಹೆಚ್ಚಿತ್ತು. ಮಂಗಳೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 36.6 ಡಿಗ್ರಿ ಸೆ. ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆ. ದಾಖಲಾಗಿದೆ.
37 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗು ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾದರೆ ಹವಾಮಾನ ಇಲಾಖೆಯು ಅಂತಹ ಭಾಗಗಳಲ್ಲಿ ಹೀಟ್ ವೇವ್ನ್ನು ಘೋಷಿಸುತ್ತದೆ. ಆದರೆ ಇದು ಒಂದೇ ದಿನ ದಾಖಲಾದರೆ ಘೋಷಿಸಲಾಗುವುದಿಲ್ಲ. ಒಂದೇ ಭಾಗದ ಕನಿಷ್ಠ ಎರಡು ಹವಾಮಾನ ನಿಗಾ ಕೇಂದ್ರಗಳಲ್ಲಿ ಎರಡು ದಿನ ಈ ಉಷ್ಣಾಂಶ ಪ್ರಮಾಣ ದಾಖಲಾದರೆ ಮಾತ್ರ ಉಷ್ಣ ಅಲೆ ಅಥವಾ ಹೀಟ್ ವೇವ್ನ್ನು ಆ ಭಾಗದಲ್ಲಿ ಘೋಷಣೆ ಮಾಡಲಾಗುತ್ತದೆ. ಹೀಗಾಗಿ ಕಾರವಾರ ಮತ್ತು ಪಣಂಬೂರಿನಲ್ಲಿರುವ ಹವಾಮಾನ ನಿಗಾ ಕೇಂದ್ರಗಳಲ್ಲಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಇಲಾಖೆಯು ಉಷ್ಣ ಅಲೆಯ ಎಚ್ಚರಿಕೆಯನ್ನು ನೀಡಿತ್ತು ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.