ಉಡುಪಿ, ಮಾ 05 (DaijiworldNews/HR): ಶುದ್ಧ ಕುಡಿಯುವ ನೀರಿನ ಬಾವಿಗಳ ನೀರು ಕಲುಷಿತಗೊಂಡು, ಪರಿಸರದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ಶಾರದ ಕಲ್ಯಾಣ ಮಂಟಪದ ಪರಿಸರದಲ್ಲಿ ನಡೆದಿದೆ. ರಸ್ತೆ ಕಾಮಗಾರಿಯ ಪರಿಣಾಮ ಈ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳಿಯರು ದೂರಿದ್ದಾರೆ.
ಶಾರದ ಕಲ್ಯಾಣ ಮಂಟಪದಿಂದ ಬೀಡಿನಗುಡ್ಡೆ ಸಂಪರ್ಕಿಸುವ ರಸ್ತೆಯ ಕಾಮಗಾರಿ ನಡೆಯುವ ಸಂದರ್ಭ, ಕಾಂಕ್ರೀಟ್ ರಸ್ತೆಯನ್ನು ಜೆಸಿಬಿ ಯಂತ್ರಗಳ ಮೂಲಕ ಅಗೆಯಲಾಗಿದೆ. ಅಗೆಯುವ ಸಂದರ್ಭ ಡ್ರೈನೆಜ್ ಕೊಳವೆ ಘಾಸಿಕೊಂಡಿದೆ. ಪರಿಣಾಮ ಪರಿಸರದ ಮನೆಗಳ ಬಾವಿಗಳಿಗೆ ತ್ಯಾಜ್ಯ ನೀರು ಸೇರಿಕೊಂಡು, ಶುದ್ಧ ನೀರು ಕಲುಷಿತಗೊಂಡಿದೆ. ಇಲ್ಲಿಯ ನಿವಾಸಿಗಳು ಬಾವಿ ನೀರು ಸೇವಿಸಿ, ವಾಂತಿ ಬೇಧಿ, ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆಗಳು ನಡೆದಿವೆ.
ಇನ್ನು ಮುಂದೆ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.