ಮಣಿಪಾಲ, ಮಾ 05 (DaijiworldNews/HR): ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಶನಿವಾರ ಮಣಿಪಾಲದ ಸಿಂಡಿಕೇಟ್ ಸರ್ಕಲ್ ನಿಂದ ದೇವಸ್ಥಾನದವರೆಗೆ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀವಿಧುಶೇಖರ ಭಾರತೀ ಸ್ವಾಮೀಜಿಯವರ ವೈಭವದ ಶೋಭಾಯಾತ್ರೆ ನಡೆಯಿತು.
ಪ್ರಚಾರ ವಾಹನ, ವೇದ ಘೋಷದ ವಾಹನ, ಆಕರ್ಷಕ ಬಿರುದಾವಳಿಗಳು, ಬ್ಯಾಂಡ್ಸೆಟ್, ಕೊಡೆ ಮತ್ತು ಕಲಶ, ಧ್ವಜ, ಚೆಂಡೆ, ಕುಣಿತ ಭಜನೆ, ಹೋಳಿ ಕುಣಿತ, ಕೊಂಬು, ನಾದಸ್ವರ ಮತ್ತು ಪುಷ್ಪಾರ್ಚನೆ ಗಮನಸೆಳೆಯಿತು. ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಯರು ಮತ್ತು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದವರಿಗೆಲ್ಲ ಕೇಸರಿ ಪೇಟ ತೊಡಿಸಲಾಗಿತ್ತು.
ವಿಶೇಷವಾಗಿ ಮರಾಠಿ ಸಮುದಾಯದ ಸುಮಾರು 700 ಅಧಿಕ ಮಂದಿ ಹೋಳಿ ಕುಣಿತದ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಶಾಸಕ ಕೆ.ರಘುಪತಿ ಭಟ್, ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಿದ್ದರು.