ಮಂಗಳೂರು, ಮಾ 04 (DaijiworldNews/HR): ಮಂಗಳೂರಿನ ಹಂಪನಕಟ್ಟೆಯ ಜುವೆಲ್ಲರಿ ಸಿಬ್ಬಂದಿಯ ಕೊಲೆ ಆರೋಪಿಯನ್ನು ಸೆರೆ ಹಿಡಿದ ಕಾಸರಗೋಡು ಠಾಣೆಯ ಪೊಲೀಸರಿಗೆ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಈ ತಂಡವನ್ನು ಪ್ರಶಂಸಿ ಸನ್ಮಾನಿಸಿದ್ದು, ಮಂಗಳೂರಿನ 8 ಪೊಲೀಸ್ ತಂಡಕ್ಕೆ 25 ಸಾವಿರ ರೂ. ಬಹುಮಾನವನ್ನು ಇಲಾಖಾ ವತಿಯಿಂದ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಇನ್ನು ಕೇರಳದ ಕಲ್ಲಿಕೋಟೆ ಜಿಲ್ಲೆಯ ಕೊಯಿಲಾಂಡಿ ತಾಲೂಕಿನ ಆರೋಪಿ ಸಿಫಾಝ್ ಪಿ.ಪಿ. ಯಾನೆ ಇಕ್ಕ (30)ನನ್ನು ಕಾಸರಗೋಡು ಡಿವೈಎಸ್ಪಿ ಸುಧಾಕರನ್ ನೇತೃತ್ವದ ಸೈಬರ್ ಕ್ರೈಂ ಠಾಣೆಯ ಇನ್ಸ್ಪೆಕ್ಟರ್ ಪ್ರೇಮ್ ಸದನ್, ಸೈಬರ್ ಸೆಲ್ನ ಎಸ್ಸೈ ಅಜಿತ್ ಪಿ.ಕೆ., ಪೊಲೀಸ್ ಕಾನ್ಸ್ಟೇಬಲ್ಗಳಾದ ನಿಜಿನ್ ಕುಮಾರ್, ರಜೀಶ್ ಕಟ್ಟಂಪಲ್ಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿ ಸಿಫಾಝ್ ಫೆ.3ರಂದು ನಗರದ ಮಂಗಳೂರು ಜ್ಯುವೆಲ್ಲರ್ಸ್ನ ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಕೊಲೆ ಮಾಡಿದ್ದು, ಇದೀಗ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.