ಉಡುಪಿ, ಮಾ 18 (MSP): ಹಿಂದುಗಳು ಯಾರು ಎಂಬುವುದನ್ನು ಪೇಜಾವರ ಶ್ರೀಗಳು ಸ್ಪಷ್ಟವಾಗಿ ತಿಳಿಸಬೇಕು. ಹಿಂದುಗಳ ಪರ ಎಂದು ಹೇಳಿಕೊಂಡು ಒಂದು ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವುದಾದರೆ ಅದು ರಾಜಕೀಯ ದ್ರೋಹ ಮಾತ್ರವಲ್ಲ, ಧರ್ಮದ್ರೋಹ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನ್ ಮಟ್ಟು ಹೇಳಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವಜನೋತ್ಸವ ಸಮಾವೇಶದಲ್ಲಿ ಮಾತನಾಡಿದ ಅವರು, ’ ಪೇಜಾವರ ಶ್ರೀಗಳು ಹಿರಿಯರು ಅವರ ಬಗ್ಗೆ ಹೆಚ್ಚು ಗೌರವವಿದೆ. ಆದರೆ ಇಲ್ಲಿ ಸೈದ್ಧಾಂತಿಕ ವಿಚಾರಗಳನ್ನಷ್ಟೆ ಪ್ರಸ್ತಾಪಿಸುತ್ತಿದ್ದೇನೆ. ಪೇಜಾವರ ಶ್ರೀಗಳಿಗೆ ರಘುಪತಿ ಭಟ್ಟರು ಉತ್ತಮ ಹಿಂದೂ ಎನಿಸಿದರೆ ಬಹಿರಂಗವಾಗಿ ಹೇಳಲಿ. ಅವರ ವಿರುದ್ದ ನಿಲ್ಲುವ ವ್ಯಕ್ತಿ ಹಿಂದೂ ಅಲ್ಲ ಎನ್ನುವುದಕ್ಕೆ ಕಾರಣ ಕೊಡಲಿ. ಒಟ್ಟಾರೆ ನಿಜವಾದ ಹಿಂದುಗಳು ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದರು.
ಆರ್ ಎಸ್ ಎಸ್ ಬಳಿ ಹಿಂದೂ ಧರ್ಮದ ಅರ್ಥ ಕೇಳಬೇಕು. ಹಿಂದುಗಳು ಎಂದರೆ ಯಾರು , ನೀವು ಪ್ರತಿನಿಧಿಸುವ ಸಂಸ್ಕೃತಿ ಯಾವುದು, ಪಬ್ ಗಳಿಗೆ ಹೋದ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡುವುದು ಹಿಂದು ಸಂಸ್ಕೃತಿಯೇ ಎಂದು ಜನರು ಪ್ರಶ್ನಿಸಿಬೇಕು ಎಂದರು.
ಮಂಗಳೂರು ಮಲ್ಲಿಗೆಯಂತಹ ಸಹಬಾಳ್ವೆ ಎಲ್ಲಿಯೂ ಕಾಣಲು ಸಿಗಲು ಸಾಧ್ಯವಿಲ್ಲ. ಇಲ್ಲಿ ಮಲ್ಲಿಗೆ ಬೆಳೆಯುವವರು ಕ್ರಿಶ್ಚಿಯನ್ನರು, ಮಾರಾಟ ಮಾಡುವವರು ಮುಸ್ಲಿಮರು, ಮುಡಿಯುವವರು ಹಿಂದುಗಳು ಇದಕ್ಕಿಂತ ದೊಡ್ಡ ಸಹಬಾಳ್ವೆಗೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದರು.