ಕಾರ್ಕಳ, ಮಾ 04 (DaijiworldNews/HR): ಕಾರ್ಕಳದ ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸದಾಗಿ ವಿಸ್ತರಿಸಿದ ಆಸ್ಪತ್ರೆ, ರೊ// ಕೆ ಕೃಷ್ಣ ಪ್ರಭು ಒಪಿಡಿ ಬ್ಲಾಕ್ ಮತ್ತು ಹೊಸ ಆಪರೇಷನ್ ಥಿಯೇಟರ್ ಕಾಂಪ್ಲೆಕ್ಸ್ ಅನ್ನು ಮಾರ್ಚ್ 7ರಂದು ಉದ್ಘಾಟಿಸಲಾಗುವುದು ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಡಾ ಟಿಎಮ್ಎ ಪೈ ರೋಟರಿ ಆಸ್ಪತ್ರೆಯು ಕಾರ್ಕಳದ ಹೃದಯಭಾಗದಲ್ಲಿದ್ದು, ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಿಶ್ವಾಸಾರ್ಹ ಮತ್ತು ನಂಬುಗೆಯ ಆರೋಗ್ಯ ಸೇವೆ ಒದಗಿಸುತ್ತಿದೆ. ಕರ್ನಾಟಕ ಸರ್ಕಾರದ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್ ಅವರು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ ಶರತ್ ಕುಮಾರ್ ರಾವ್, ಸಹ - ಉಪ ಕುಲಪತಿಗಳು -ಆರೋಗ್ಯ ವಿಜ್ಞಾನ, ಮಾಹೆ ಮಣಿಪಾಲ, ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್- ಉಪಕುಲಪತಿಗಳು, ಮಾಹೆ, ಮಣಿಪಾಲ ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿದ್ದಾರೆ. ಡಾ. ಎಚ್.ಎಸ್. ಬಲ್ಲಾಳ್-ಸಹ ಕುಲಾಧಿಪತಿಗಳು , ಮಾಹೆ, ಮಣಿಪಾಲ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ರೋಟರಿ ಸ್ನೇಹಿತರು ಹಾಗೂ ಹಿರಿಯ ವೈದ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಇನ್ನು ಹೊಸದಾಗಿ ವಿಸ್ತರಿಸಿದ ಕಾರ್ಕಳ ಆಸ್ಪತ್ರೆಯಲ್ಲಿ ಆಧುನಿಕ ಆಪರೇಷನ್ ಥಿಯೇಟರ್ ಮತ್ತು 24*7 ಎಮರ್ಜೆನ್ಸಿ ಮತ್ತು ಟ್ರಾಮಾ ಸೌಲಭ್ಯಗಳು, ಸುಧಾರಿತ ರೋಗನಿರ್ಣಯದ ಉಪಕರಣಗಳು ಮತ್ತು ಸುಸಜ್ಜಿತ ಐಸಿಯು ಸೌಲಭ್ಯಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಮತ್ತು ಉಪಕರಣಗಳನ್ನು ಹೊಂದಿರುತ್ತದೆ. ನಾವು ಆಸ್ಪತ್ರೆಗೆ ಹೊಸ ವೈದ್ಯಕೀಯ ಸೇವೆಗಳನ್ನು ಸೇರಿಸುತ್ತಿದ್ದೇವೆ, ಸಾಮಾನ್ಯ ಶಸ್ತ್ರಚಿಕಿತ್ಸ ವಿಭಾಗ ಮತ್ತು ಮೂಳೆ ಶಸ್ತ್ರಚಿಕಿತ್ಸ ವಿಭಾಗ ಈಗ ಲಭ್ಯವಿರುವ ಹೊಸ ಸೇವೆಗಳು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಹೃದಯಶಾಸ್ತ್ರ, ನರರೋಗ ಶಾಸ್ತ್ರ, ಕ್ಯಾನ್ಸರ್ (ಸರ್ಜಿಕಲ್ ಕ್ಯಾನ್ಸರ್ ಮತ್ತು ಪ್ರಶಾಮಕ ಚಿಕಿತ್ಸೆ) ಮತ್ತು ಮೂತ್ರಪಿಂಡ ಶಾಸ್ತ್ರದ ಸೂಪರ್ ಸ್ಪೆಷಾಲಿಟಿ ವಿಭಾಗಗಳ ಸಲಹೆಗಾರರ ನಿಯಮಿತ ಭೇಟಿಗಳ ಜೊತೆಗೆ ಅಸ್ತಿತ್ವದಲ್ಲಿರುವ ಜನರಲ್ ಮೆಡಿಸಿನ್, ಮಕ್ಕಳ ವಿಬಾಗ, ನೇತ್ರಶಾಸ್ತ್ರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಇಎನ್ಟಿ , ಅರಿವಳಿಕೆ ಮತ್ತು ಚರ್ಮ ರೋಗ ವಿಬಾಗದ ಸೌಲಭ್ಯವು ಮುಂದುವರಿಯುತ್ತದೆ. ನಮ್ಮ ಹೆಚ್ಚು ನುರಿತ ವೈದ್ಯರು ಮತ್ತು ವೃತ್ತಿಪರರ ತಂಡವು ಈ ವಿಶೇಷತೆಗಳಲ್ಲಿ ರೋಗಿಗಳಿಗೆ ಆರೈಕೆಯನ್ನು ಒದಗಿಸುತ್ತದೆ. ಆಸ್ಪತ್ರೆಯು ಮೇಲ್ದರ್ಜೆಗೇರಿಸಿದ ಲ್ಯಾಬ್ ಸೌಲಭ್ಯವನ್ನು ಹೊಂದಿದ್ದು, ಮನೆಯಿಂದ ಮಾದರಿ ಸಂಗ್ರಹಣೆ ಸೌಲಭ್ಯ ಮತ್ತು ಆಂಬ್ಯುಲೆನ್ಸ್ ಸೌಲಭ್ಯವನ್ನು ಹೊಂದಿದೆ. ಡಾ ಟಿಎಂಎ ಪೈ ರೋಟರಿ ಆಸ್ಪತ್ರೆಯು ಕಳೆದ 2 ವರ್ಷಗಳಿಂದ ಡಯಾಲಿಸಿಸ್ ಸೌಲಭ್ಯವನ್ನು ವಿಸ್ತರಿಸುತ್ತಿದ್ದು, ತಿಂಗಳಿಗೆ ಸುಮಾರು 200 ಡಯಾಲಿಸಿಸ್ ನಡೆಸುತ್ತಿದೆ ಎಂದಿದ್ದಾರೆ.
ಕಾರ್ಕಳ ಆಸ್ಪತ್ರೆಯ ವಿಸ್ತರಣೆಯು ಕಾರ್ಕಳ ಮತ್ತು ಸುತ್ತಮುತ್ತಲಿನ ಜನರಿಗೆ ಕೈಗೆಟುಕುವ ಮತ್ತು ಸುಲಭವಾಗಿ ಆರೋಗ್ಯ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯ ಮಹತ್ವದ ಮೈಲಿಗಲ್ಲು. ಹೊಸ ಸೌಲಭ್ಯಗಳು, ಉಪಕರಣಗಳು ಮತ್ತು ಸೇವೆಗಳೊಂದಿಗೆ, ನಾವು ನಮ್ಮ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಅವರು ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬಹುದು.
ಈ ವೇಳೆ ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಮಾರ್ಕೆಟಿಂಗ್ ಮುಖ್ಯಸ್ಥ ಸಚಿನ್ ಕಾರಂತ್, ಮಣಿಪಾಲದ ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಶೆಟ್ಟಿ, ಕಾರ್ಕಳ ಆಸ್ಪತ್ರೆಯ ಮ್ಯಾನೇಜರ್ ನಟೇಶ್ ಕುಮಾರ್ ಉಪಸ್ಥಿತರಿದ್ದರು.