ಮಂಗಳೂರು, ಮಾ 04 (DaijiworldNews/DB): ರಾಜ್ಯದ 150 ಇಂಜಿನಿಯರಿಂಗ್ ಕಾಲೇಜು ಮತ್ತು 50ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಪ್ರವೇಶಕ್ಕಾಗಿ ಕಾಮೆಡ್-ಕೆ ಯುಗೇಟ್ ಮತ್ತು ಯುನಿ ಗೇಜ್ ಪ್ರವೇಶ ಪರೀಕ್ಷೆಗಳು ಮೇ 28ರ ಭಾನುವಾರದಂದು ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಮೆಡ್-ಕೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್, ಪ್ರವೇಶ ಪರೀಕ್ಷೆಯನ್ನು ಕರ್ನಾಟಕ ಅನುದಾನರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ ನೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳು ಮತ್ತು ಬಿಇ/ ಬಿಟೆಕ್ ತರಗತಿ ಒದಗಿಸುವ ಯುನಿ-ಗೇಜ್ ಸದಸ್ಯ ವಿಶ್ವವಿದ್ಯಾಲಯಗಳಿಗೆ ನಡೆಸಲಾಗುತ್ತದೆ. ಭಾರತದಾದ್ಯಂತ 150ಕ್ಕೂ ಹೆಚ್ಚು ನಗರಗಳಲ್ಲಿ 400 ಪರೀಕ್ಷಾ ಕೇಂದ್ರಗಳೊಂದಿಗೆ ಆನ್ಲೈನ್ನಲ್ಲಿ ನಡೆಸಲಾಗುತ್ತದೆ. ಮಂಗಳೂರಿನಲ್ಲಿ 5, ಉಡುಪಿಯಲ್ಲಿ 4 ಹಾಗೂ ಪುತ್ತೂರಿನಲ್ಲಿ 1 ಪರೀಕ್ಷಾ ಕೇಂದ್ರ ಇದೆ. ಈ ವರ್ಷ 1 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ ಎಂದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗೆ ರಾಜ್ಯ ಸರ್ಕಾರ ನೀಡಿರುವ ಶೇ. 45 ಸೀಟುಗಳ ಭರ್ತಿಗಾಗಿ ಈ ಪರೀಕ್ಷೆ ನಡೆಯುತ್ತದೆ. ರಾಜ್ಯದಲ್ಲಿ ಈ ಕೋಟಾದಲ್ಲಿ 22 ಸಾವಿರ ಸೀಟುಗಳಿದ್ದು, ಅವುಗಳ ಭರ್ತಿಗಾಗಿ ದೇಶದ ಯಾವುದೇ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಬಹುದು ಎಂದು ಮಾಹಿತಿ ನೀಡಿದರು.
ಎರಾ ಫೌಂಡೇಶನ್ ಸಿಇಓ ಪಿ. ಮುರಳಿಧರ್ ಮಾತನಾಡಿ, ಆಸಕ್ತರು www.comedk.org or www.unigauge.com ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯು ಫೆಬ್ರವರಿ 15ರಿಂದ ಏಪ್ರಿಲ್ 24ರವರೆಗೆ ಆನ್ಲೈನ್ನಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದರು.
ಕಾಮೆಡ್-ಕೆ ಈ ವರ್ಷ ಕಾಮೆಡ್ ಕರೇಸ್ ನ್ನು ಪ್ರಾರಂಭಿಸಿದೆ. ಇದರಲ್ಲಿ ಭಾಗವಹಿಸುವ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕೌಶಲ್ಯ ವರ್ಧಕ ಕೋರ್ಸ್ಗಳ ಮೂಲಕ ಉದ್ಯೋಗಕ್ಕೆ ಸಿದ್ಧರಾಗಲು ಸಹಾಯ ಮಾಡುತ್ತದೆ. ಕಾಮೆಡ್ ಕರೇಸ್ ಕರ್ನಾಟಕದಲ್ಲಿ ಎಂಟು ಇನ್ನೋವೇಶನ್ ಹಬ್ಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ 40 ಬೆಂಗಳೂರಿನಲ್ಲಿದ್ದರೆ, ಉಳಿದವು ಮೈಸೂರು, ಕಲಬುರಗಿ, ಮಂಗಳೂರು, ಬೆಳಗಾವಿಯಲ್ಲಿವೆ ಎಂದವರು ವಿವರಿಸಿದರು.