ಕಾಸರಗೋಡು, ಮಾ 03 (DaijiworldNews/SM): ಮಂಗಳೂರಿನ ಹಂಪನಕಟ್ಟೆಯ ಜುವೆಲ್ಲರಿ ಸಿಬ್ಬಂದಿಯ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿರುವ ಆರೋಪಿ ಶಿಫಾಝ್ ಕಾಸರಗೋಡಿನ ದರೋಡೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಮಂಗಳೂರು ಮಾದರಿಯಲ್ಲೇ ಕಾಸರಗೋಡಿನಲ್ಲಿಯೂ ಕೃತ್ಯ ನಡೆಸಲು ಈತ ಯೋಜನೆ ಹಾಕಿದ್ದ ಎಂಬ ಮಾಹಿತಿ ಕಾಸರಗೋಡು ಪೊಲೀಸರಿಗೆ ಲಭಿಸಿದೆ.
ಮಂಗಳೂರಿನಲ್ಲಿ ಕೃತ್ಯ ನಡೆಸಿದ ಬಳಿಕ ಈತ ಕಾಸರಗೋಡಿಗೆ ತಲುಪಿದ್ದ. ನಗರದ ಫ್ಯಾನ್ಸಿ ಮಳಿಗೆಗೆ ಹಾಗೂ ಇನ್ನಿತರ ಕಡೆಗಳಿಗೆ ಈತ ತೆರಳಿದ್ದು, ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಬಂಧಿಸಿದ ಸಂದರ್ಭದಲ್ಲಿ ಈತನ ಬಳಿಯಲ್ಲಿದ್ದ ಬ್ಯಾಗ್ ನಲ್ಲಿ ಏರ್ ಪಿಸ್ತೂಲ್, ಕಾಳು ಮೆಣಸು ಸ್ಪ್ರೇ, ವಿಗ್ ಪತ್ತೆಯಾಗಿದೆ.
ಈತನ ಚಲನ ವಲನ ಗಳನ್ನು ಗಮನಿಸಿದ್ದ ಕಾಸರಗೋಡು ಪೊಲೀಸರು ನಗರದ ಶ್ರೀ ಮಲ್ಲಿ ಕಾರ್ಜುನ ದೇವಸ್ಥಾನ ಪರಿಸರದಿಂದ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಂಗಳೂರಿನ ಕೊಲೆ ಬಗ್ಗೆ ಬಾಯ್ಬಿಟ್ಟಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈತ ಕಾಸರಗೋಡಿನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿಗಳು ಲಭಿಸಿತ್ತು. ಮಂಗಳೂರು ಪೊಲೀಸರು ಹಲವು ಬಾರಿ ಕಾಸರಗೋಡಿಗೆ ಆಗಮಿಸಿ ಪತ್ತೆಗಾಗಿ ಶೋಧ ನಡೆಸಿದ್ದರು. ಆರೋಪಿಯ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಮಂಗಳೂರಿನಿಂದ ಲಭಿಸಿದ ಸಿಸಿಟಿವಿ ದೃಶ್ಯಗಳು ಆರೋಪಿಯ ಗುರುತು ಪತ್ತೆ ಹಚ್ಚಲು ನೆರವಾಗಿತ್ತು. ಈತನ ಮುಖದ ಚಹರೆ ಗುರುತಿಸಿ ಕಾಸರಗೋಡು ಪೊಲೀಸರು ಆರೋಪಿಯನ್ನು ಬಲೆಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.