ಉಡುಪಿ, ಮಾ 03 (DaijiworldNews/SM): ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮನೆಯಲ್ಲಿ ಆರು ಕೋಟಿ ರುಪಾಯಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಭ್ರಷ್ಟ ಜನತಾ ಪಾರ್ಟಿಯಾಗಿದೆ. ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. 40% ಭ್ರಷ್ಟ ಸರ್ಕಾರದಿಂದ ರಾಜ್ಯ ತಲೆತಗ್ಗಿಸುವಂತಾಗಿದೆ ಎಂದರು.
ಪುತ್ರನ ಮನೆಯಲ್ಲಿ 40 ಲಕ್ಷ ರೂಪಾಯಿ ರೆಡ್ ಹ್ಯಾಂಡ್ ಆಗಿ ಸಿಕ್ಕಿದೆ. 24 ಗಂಟೆ ಒಳಗೆ ಮನೆಯಲ್ಲಿ 6 ಕೋಟಿ ರೂಪಾಯಿ ಪತ್ತೆಯಾಗಿದೆ. ಶಾಸಕ ವಿರುಪಾಕ್ಷಪ್ಪ ಎಲ್ಲಿ ತಲೆಮರಸಿಕೊಂಡಿದ್ದಾರೆ? ಮೈಸೂರು ಸ್ಯಾಂಡಲ್ ಸುವಾಸನೆಯನ್ನು ಭ್ರಷ್ಟ ಮಾಡಿಬಿಟ್ಟಿದ್ದಾರೆ. ಇದು ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾಬೂನಿನಿಂದ ಎಷ್ಟು ಭ್ರಷ್ಟಾಚಾರವಾಗಿದ್ದರೆ ರಾಜ್ಯದ ಭ್ರಷ್ಟಾಚಾರ ಪ್ರಮಾಣ ಎಷ್ಟು? ಈ ಎಲ್ಲಾ ಭ್ರಷ್ಟಾಚಾರದ ಹಣ ಎಲ್ಲಿಗೆ ಹೋಗಿದೆ? ರಾಜ್ಯದಲ್ಲಿ ಲೂಟಿ ಹೊಡೆದ ಹಣಕ್ಕೆ ಯಾರು ಜವಾಬ್ದಾರಿ? ಲೂಟಿ ಹೊಡೆದ ಹಣದಲ್ಲಿ ಬಸವರಾಜ್ ಬೊಮ್ಮಾಯಿ, ಮಂತ್ರಿಗಳಿಗೆ ಎಷ್ಟು ಪಾಲು ಇದೆ? ಕೈಗಾರಿಕಾ ಸಚಿವ ನಿರಾಣಿಯ ತಲೆದಂಡ ಆಗಿಲ್ಲ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಕೆ ಎಸ್ ಡಿ ಎಲ್ ಅಧ್ಯಕ್ಷ ಶಾಸಕ ವಿರೂಪಾಕ್ಷಪ್ಪ ತಲೆಮರೆಸಿಕೊಳ್ಳಲು ಬಿಟ್ಟಿದ್ಯಾಕೆ? ಈ ಭ್ರಷ್ಟಾಚಾರದಲ್ಲಿ ಬಸವರಾಜ ಬೊಮ್ಮಾಯಿ ಪಾತ್ರ ಏನು? ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೌನ ಇರುವುದು ಯಾಕೆ? ಇಡಿ, ಸಿ ಬಿ ಐ ಯಾವಾಗ ಕರ್ನಾಟಕಕ್ಕೆ ಬರುತ್ತದೆ? ಶಾಸಕರು ಮಂತ್ರಿಗಳ ಮುಖ್ಯಮಂತ್ರಿಗಳ ಮನೆಗೆ ಯಾವಾಗ ದಾಳಿ ಮಾಡುತ್ತೀರಿ? ನಾಡಿನ ಜನರ ಪರವಾಗಿ ಈ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.