ಕಾರ್ಕಳ, ಮಾ 03 (DaijiworldNews/DB): ಡೀಮ್ಡ್ ಫಾರೆಸ್ಟ್ ಸಮಸ್ಯೆ ರಾಜ್ಯ ಸರಕಾರ ನಿವಾರಣೆ ಮಾಡಿರುವುದರಿಂದ ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಜಾಗ ಒದಗಿಸಲು ಸಾಧ್ಯವಾಗಿದೆ. ಆ ಮೂಲಕ 3,000 ಮಂದಿಗೆ ಉದ್ಯೋಗ ಲಭಿಸುವ ಮೂಲಕ ಕಾರ್ಕಳ ಅಭಿವೃದ್ಧಿಗೆ ಜವಳಿ ಪಾರ್ಕ್ ಹೊಸ ಕೊಡುಗೆ ನೀಡಿದೆ ಎಂದು ಸಚಿವ ವಿ. ಸುನೀಲ್ಕುಮಾರ್ ಹೇಳಿದ್ದಾರೆ.
ನಿಟ್ಟೆ ಮದನಾಡು ಎಂಬಲ್ಲಿ ಜವಳಿ ಪಾರ್ಕ್ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಾರ್ಕಳದಲ್ಲಿ ಉದ್ಯೋಗ ಮತ್ತು ಉದ್ಯಮ ಸೃಷ್ಠಿಯಲ್ಲಿ ಗೇರು ಬೀಜ ಫ್ಯಾಕ್ಟರಿ ಮಹತ್ವದ ಪಾತ್ರ ವಹಿಸಿದೆ. ಗ್ರಾಮೀಣ ಭಾಗದಲ್ಲಿ 50 ಫ್ಯಾಕ್ಟರಿಗಳು 50,000ಕ್ಕೂ ಮಿಕ್ಕಿ ಉದ್ಯೋಗ ಸೃಷ್ಠಿಸಿವೆ. ಹೆಬ್ರಿ ಹಾಗೂ ಅಸುಪಾಸಿನಲ್ಲಿ ಅಕ್ಕಿ ಗಿರಾಣಿಗಳು ಹಲವಾರು ಉದ್ಯೋಗವನ್ನು ನೀಡಿದೆ. ಇದರೊಂದಿಗೆ ಬೇರೆ ಬೇರೆ ಉದ್ಯಮಗಳು ಕಾರ್ಕಳಕ್ಕೆ ಬರಬೇಕು. ಸಾಮಾನ್ಯವಾಗಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಕಲಿತ ಯುವ ಸಮುದಾಯಕ್ಕೂ ಇದರಿಂದ ಉದ್ಯೋಗ ಲಭಿಸುತ್ತದೆ. ಬಸವರಾಜು ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಇದ್ದಾಗ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಜೆಟಿನಲ್ಲಿ ಜವಳಿ ಪಾರ್ಕ್ ಘೋಷಣೆಯಾಗಿತ್ತು. 15 ಎಕರೆ ಜಾಗ ಹೊಂದಿರುವ ಜವಳಿ ಪಾರ್ಕ್ನಲ್ಲಿ ನೂಲ ತಯಾರಿಕ ಘಟಕದಿಂದ ಹಂತ ಹಂತವಾಗಿ ವಿವಿಧ ಉಡುಪುಗಳು ಎಲ್ಲವೂ ಇಲ್ಲಿಯೇ ಉತ್ಪಾದನೆಯಾಗಲಿದೆ. ಇನ್ನಷ್ಟು ಜಾಗದ ಬೇಡಿಕೆ ಅನುಗುಣವಾ ಸ್ಪಂದಿಸುವುದಾಗಿ ಇದೇ ಭರವಸೆ ನೀಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕ ಶಿವ ಶಂಕರ ಮಾತನಾಡಿ, ಎರಡು ಕಡೆ ಜವಳಿ ಪಾರ್ಕ್ ಗೆ ಅವಕಾಶ ಸಿಕ್ಕಿದೆ. ಸಿದ್ಧ ಉಡುಪಿಗೆ ಉತ್ತಮ ಭವಿಷ್ಯ ಇದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಕುರ್ಮಾರಾವ್ ಮಾತನಾಡಿ, ಸದಾ ಅಭಿವೃದ್ಧಿ ಚಿಂತನೆ ಹೊಸತನವನ್ನು ಹುಟು ಹಾಕುತ್ತದೆ. ಥೀಮ್ ಪಾರ್ಕ್ನ ಮೂಲಕ ಸಂಚಲನ ಮೂಡಿಸಿ ಇದೀಗ, ಜವಳಿ ಪಾರ್ಕ್ನತ್ತ ಸಚಿವರ ಯೋಜನೆ ಯೋಚನೆ ಹರಿಸಿರುವುದು ಶ್ಲಾಘನೀಯವಾಗಿದೆ. ಕೃಷಿ ಕ್ಷೇತ್ರ ನಂತರ ಹೆಚ್ಚು ಉದ್ಯೋಗವನ್ನು ಜವಳಿ ಉದ್ಯಮ ನೀಡುತ್ತಿದೆ ಎಂದರು.
ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಮಾತನಾಡಿ, ಜವಳಿ ಪಾರ್ಕ್ ನಿರ್ಮಾಣದಿಂದ ಹಲವು ಉದ್ಯಮ ಹಾಗೂ ಉದ್ಯೋಗ ನೇರ, ಪರೋಕ್ಷವಾಗಿ ಸೃಷ್ಠಿಯಾಗಲಿದೆ. ಬೇರೆ ಬೇರೆ ಕೌಶಲ್ಯ ಹೊಂದಿದವರಿಗೆ ಈ ಉದ್ಯಮದಲ್ಲಿ ಬೇಡಿಕೆ ಹೆಚ್ಚಾಗಿ ಕಂಡು ಬರಲಿದೆ. ಉಡುಪಿ ಸೀರೆಗೆ ದೇಶದಲ್ಲಿ ಭಾರೀ ಬೇಡಿಕೆ ಇದ್ದು, ಅದರಲ್ಲಿ ಕೇವಲ 35 ಮಂದಿ ಮಾತ್ರ ಈ ಕ್ಷೇತ್ರದಲ್ಲಿ ದುಡಿಯುತ್ತಿರುವುದು ಗಮನಾರ್ಹವೆಂದರು.
ತಹಶೀಲ್ದಾರ್ ಅನಂತ ಶಂಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ಉಪಾಧ್ಯಕ್ಷೆ ಸುಮಿತ್ರಾ ಆಚಾರ್ಯ, ಅಶೋಕ್ ಅಡ್ಯಾಮತಾಯ, ಪ್ರಶಾಂತ್ ಆರ್., ಸಂತೋಷ್ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.