ಮಂಗಳೂರು, ಮಾ 03 (DaijiworldNews/DB): ವಿಶ್ವ ಆರೋಗ್ಯ ಸಂಸ್ಥೆಯ "ಎಲ್ಲರಿಗೂ ಕಿವಿ ಮತ್ತು ಶ್ರವಣ ಆರೈಕೆ ಥೀಂನಡಿಯಲ್ಲಿ ವಿಶ್ವ ಶ್ರವಣ ದಿನದ ಉದ್ಘಾಟನಾ ಕಾರ್ಯಕ್ರಮವು ಫಾದರ್ ಮುಲ್ಲರ್ ಕಾಲೇಜು (ಸ್ಪೀಚ್ ಮತ್ತು ಹಿಯರಿಂಗ್) ವತಿಯಿಂದ ಮಾರ್ಚ್ 3ರ ಶುಕ್ರವಾರ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ನಡೆಯಿತು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ (ಪರಿಸರ) ದೀಪ್ತಿ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಖುಷಿಯಾಗುತ್ತಿದೆ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಫ್ಎಂಸಿಐ ನಿರ್ದೇಶಕ ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಹುಟ್ಟಿನಿಂದ ಸಾವಿನವರೆಗೆ ಶ್ರವಣೇಂದ್ರಿಯದ ಮಹತ್ವ ದೊಡ್ಡದು. ಏಕೆಂದರೆ ಇದು ಸಂವಹನ ಮತ್ತು ಒಗ್ಗಟ್ಟಿಗೆ ಸಹಾಯ ಮಾಡುತ್ತದೆ. ಫಾದರ್ ಮುಲ್ಲರ್ ಕಾಲೇಜು (ಸ್ಪೀಚ್ ಮತ್ತು ಹಿಯರಿಂಗ್) ಮತ್ತು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಇಎನ್ಟಿ ವಿಭಾಗದ ಸಹಯೋಗದೊಂದಿಗೆ ಈ ದಿನದ ಕಾರ್ಯಕ್ರಮವು ತೀರಾ ಪ್ರಸ್ತುತವಾಗಿದೆ. ಈ ದಿನದಂದು ನೀಡಿದ ರಿಯಾಯಿತಿಗಳನ್ನು ರೋಗಿಗಳು ಮತ್ತು ಇಲ್ಲಿ ನೆರೆದ ಜನರು ಬಳಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದರು.
ಕಿವಿ ದೇಹದ ಸೂಕ್ಶ್ಮ ಭಾಗ. ಕಿವಿಯ ನ್ಯೂನ್ಯತೆ ಇದ್ದವರಿಗಷ್ಟೆ ಅದರ ಪ್ರಾಮುಖ್ಯತೆ ತಿಳಿದಿದೆ ವಿನ: ನಾವೆಲ್ಲರೂ ಶ್ರವಣ ಆರೈಕೆಯ ಕುರಿತು ಅಸಡ್ಡೆ ತೋರುತ್ತೆವೆ. ಇಂತಹ ಕಾರ್ಯಕ್ರಮಗಳಿಂದ ಶ್ರವಣ ನಷ್ಟದ ಬಗ್ಗೆ ಮಾಹಿತಿ ತಿಳಿದಾಗ ಅದರ ಸಮಸ್ಯೆಯಿಂದ ಬಳಲುತ್ತಿರುವವರ ಸಂಕಟ ಅರಿವಾಗುತ್ತದೆ ಎಂದವರು ಅಭಿಪ್ರಾಯಪಟ್ಟರು.
ಫಾದರ್ ಮುಲ್ಲರ್ ಕಾಲೇಜಿನ ವಾಕ್ ಮತ್ತು ಶ್ರವಣ ವಿಭಾಗದ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮವು ಪ್ರಾರಂಭವಾಯಿತು. ನಂತರ ಗಣ್ಯರಿಂದ ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕಿರುನಾಟಕ, ದೈನಂದಿನ ಜೀವನದ ನಾಲ್ಕು ವಿವಿಧ ದೃಶ್ಯಗಳನ್ನು ಬಿಂಬಿಸಲಾಯಿತು. ಇದರಲ್ಲಿ ಶ್ರವಣ ದೋಷಗಳು ವ್ಯಕ್ತಿಯ ಜೀವನದಲ್ಲಿ ಹೇಗೆ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನವರಿಕೆ ಮಾಡಲಾಯಿತು.
ಎಫ್ಎಂಎಂಸಿಯ ಆಡಳಿತಾಧಿಕಾರಿ ಫಾ. ಅಜಿತ್ ಬಿ. ಮೆನೇಜಸ್, ಎಫ್ಎಂಎಂಸಿಎಚ್ನ ಸಹಾಯಕ ನಿರ್ವಾಹಕರಾದ ಫಾ. ಜೀವನ್ ಜಾರ್ಜ್ ಸಿಕ್ವೇರಾ, ಫಾ. ನೆಲ್ಸನ್ ಧೀರಜ್ ಪಾಯ್ಸ್, ಫಾ. ರೋಹನ್ ಮೈಕೆಲ್ ಡಯಾಸ್, ಸಂಶೋಧನಾ ಮುಖ್ಯಸ್ಥ ಡಾ. ಬಿ. ಸಂಜೀವ್ ರೈ, ಎಫ್ಎಂಎಂಸಿ ಡೀನ್ ಡಾ. ಆಂಟೋನಿ ಸಿಲ್ವಾನ್ ಡಿಸೋಜಾ, ಎಫ್ಎಂಎಂಸಿಎಚ್ನ ವೈದ್ಯಕೀಯ ಅಧೀಕ್ಷಕ ಡಾ. ಉದಯ ಕುಮಾರ್, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ಕಿಶನ್ ಶೆಟ್ಟಿ ಮತ್ತು ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಪಾಯ್ಸ್ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲೆ ಸಿಂಥಿಯಾ ಸಾಂತುಮಾಯೋರ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ದೀಪಕ್ ಎನ್. ರಾಜ್ ವಂದಿಸಿದರು. ಸುಶ್ಮಿತಾ ಯು.ಜೆ. ಮತ್ತು ರಾವೆನ್ ಎಚ್. ಸಾಲಿಯಾನ್ ನಿರೂಪಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕರಿಗಾಗಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉಚಿತ ಶ್ರವಣ ತಪಾಸಣೆ ಶಿಬಿರವು ಫೆಬ್ರವರಿ 27ರಿಂದ ಆರಂಭವಾಗಿದ್ದು, ಮಾರ್ಚ್ 4ರವರೆಗೆ ನಡೆಯಲಿದೆ.