ಕಡಬ, ಮಾ 03 (DaijiworldNews/HR): ಕಡಬ ತಾಲೂಕಿನ ನೆಲ್ಯಾಡಿ ಸಮೀಪದಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಹರಡುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬಾರದೆ ಮತ್ತೆ ಮುಂದಕ್ಕೆ ಸಾಗುತ್ತಿದ್ದು, ಬೆಂಕಿ ನಂದಿಸಲು ಗ್ರಾಮಸ್ಥರು, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಮೂರು ದಿನದ ಹಿಂದೆ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಸಿಬ್ಬಂದಿಗಳ ಜೊತೆಗೆ ಗ್ರಾಮಸ್ಥರು ಸಹಕರಿಸಿ ಬೆಂಕಿ ನಂದಿಸಿದ್ದರು. ಆದರೆ ಮರು ದಿನ ಸಂಜೆ ವೇಳೆಗೆ ಮತ್ತೆ ಕಾಡಿನೊಳಗೆ ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರು. ಆದರೆ ಬೆಂಕಿಯ ಕಿಡಿ ಅಲ್ಲಲ್ಲಿ ಹರಡಿರುವುದರಿಂದ ಬಿಸಿಲು ಹಾಗೂ ಗಾಳಿಗೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಾ.2 ರಂದು ಸಂಜೆ ವೇಳೆಗೆ ಹಳೆನೇರೆಂಕಿ ಗ್ರಾಮದ ಕೆಮ್ಮಿಂಜೆ, ಪಾದ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆ ವ್ಯಾಪಕವಾಗಿ ಹರಡುತ್ತಿದ್ದು ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು, ಗಿಡಗಂಟಿಗಳು ಆಹುತಿಯಾಗಿವೆ.
ಕಾಡಿನಲ್ಲಿದ್ದ ಸುಮಾರು 30 ಅಡಿಗೂ ಹೆಚ್ಚು ಎತ್ತರದ ತಾಳೆ ಮರದ ಗರಿಗಳಿಗೆ ಬೆಂಕಿ ಬಿದ್ದು ಹೊತ್ತಿಕೊಂಡು ಉರಿದಿವೆ. ಬೆಂಕಿಯ ಕಿಡಿ ಗಾಳಿಗೆ ತಾಳೆಮರದ ಗರಿಗಳಿಗೆ ತಗುಲಿ ಮರ ಹೊತ್ತಿ ಉರಿದೆ.
ಇನ್ನು ಅರಣ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಅರಣ್ಯಕ್ಕೆ ಹೊಂದಿಕೊಂಡಿರುವ ಮನೆಗಳಿಗೂ ಅಪಾಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅರಣ್ಯದೊಳಗೆ ಅಗ್ನಿಶಾಮಕ ವಾಹನ ಸಂಚಾರಕ್ಕೆ ಮಾರ್ಗವೂ ಇಲ್ಲದೇ ಇರುವುದರಿಂದ ಬೆಂಕಿ ನಂದಿಸಲು ಕಷ್ಟ ಸಾಧ್ಯವಾಗುತ್ತಿದೆ. ಖಾಸಗಿಯವರ ಜಾಗಕ್ಕೆ ಬೆಂಕಿ ಹರಡದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ರಾಮಕುಂಜ ಅರಣ್ಯ ಇಲಾಖೆಯವರು ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.ಸೇರಿದಂತೆ ನೂರಾರು ಗ್ರಾಮಸ್ಥರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ.