ಉಡುಪಿ, ಮಾ 17(SM): ಕರಾವಳಿ ಭಾಗದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಬಾಸ್ ಎಂದೇ ಪ್ರಸಿದ್ಧಿ ಪಡೆದ ವಾಸು ಮಲ್ಪೆಯವರನ್ನು ಮಾರ್ಚ್ ೧೭ರಂದು ಠಾಣೆಗೆ ಕರೆಸಿ ಸೆನ್ ಅಪರಾಧ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಪ್ರೇರಿತ ಮಾತುಗಳು, ಒಂದು ಪಕ್ಷದ ವಿರುದ್ಧ ತೆಗಳುವುದು, ರಾಜಕೀಯ ಪಕ್ಷ ಒಂದರ ನಾಯಕರಿಗೆ ಕೀಳುಮಟ್ಟದಲ್ಲಿ ಮಾತನಾಡುವ, ಅಪಹಾಸ್ಯ ಮಾಡುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಚುನಾವಣೆ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ವಾಸು ಅವರನ್ನು ಕರೆತಂದು ಎಚ್ಚರಿಕೆ ನೀಡಿ ಕಳಿಸಿದ್ದೇವೆ. ಅವರನ್ನು ಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಾಸು ಅವರ ಬಳಿ ಮೊಬೈಲ್ ಇಲ್ಲ. ಮಲ್ಪೆ ಪರಿಸರದಲ್ಲಿ ತಿರುಗಾಡುವ ಈ ವ್ಯಕ್ತಿಗೆ ಅಪರಿಚಿತರು ಹಣ, ಮದ್ಯದ ಆಸೆ ತೋರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ. ಮುಂದಿನ ದಿನಗಳಲ್ಲಿ ವಾಸು ಅವರ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಸ್ಯಕ್ಕೆ ಒಂದು ಮಿತಿ ಇರುತ್ತದೆ. ಅದು ಅತಿರೇಕಕ್ಕೇರಿದರೆ, ಸಮಾಜದ ಸ್ವಾಸ್ಥ್ಯ ಕೆಡುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.