ಮಂಗಳೂರು, ಮಾ 03 (DaijiworldNews/HR): ನಗರದ ಹಂಪನಕಟ್ಟೆಯಲ್ಲಿರುವ ಜ್ಯುವೆಲರ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವರನ್ನು ಹತ್ಯೆ ಮಾಡಿ ಅಂಗಡಿಯಲ್ಲಿದ್ದ ಕೆಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯು ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆಯ ಬಳಿಕ ಆರೋಪಿಯು ದರೋಡೆ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೋಝಿಕ್ಕೋಡ್ ಕೊಯಿಲಾಂಡಿ ನಿವಾಸಿ ಶಿಫಾಝ್(33) ಬಂಧಿತ ಆರೋಪಿಯಾಗಿದ್ದಾನೆ.
ವಿವಿಧ ಆಯಾಮದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಶಂಕಿತ ಆರೋಪಿಯ ಸಿಸಿಟಿವಿ ಕ್ಯಾಮರಾ ಚಿತ್ರ ಬಿಡುಗಡೆಗೊಳಿಸಿ ಕರ್ನಾಟಕ ಮತ್ತು ಕೇರಳದಾದ್ಯಂತ ಹುಡುಕಾಟ ನಡೆಸಿದ್ದು, ಕೊನೆಗೂ ಕಾಸರಗೋಡಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಆರೋಪಿಯ ವಿವರ:
ಕೋಝಿಕ್ಕೋಡ್ ಕೊಯಿಲಾಂಡಿ ನಿವಾಸಿಯಾಗಿರುವ ಶಿಫಾಝ್ ಮಂಗಳೂರಿನ ಕಾಲೇಜುವೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿಇ ಡಿಪ್ಲೊಮಾಗೆ ಪ್ರವೇಶ ಪಡೆದು ಎರಡು ವರ್ಷದ ಬಳಿಕ ಶಿಕ್ಷಣ ಮೊಟಕುಗೊಳಿಸಿ, ಬಳಿಕ 2014 ರಿಂದ 2019 ರವರೆಗೆ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಪ್ರಸ್ತುತ ವ್ಯಾಪಾರ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
ಇನ್ನು ಈತನಿಗೆ ಮದುವೆಯಾಗಿದ್ದು ಪತ್ನಿ ಮತ್ತು ಮಗಳು ಕೂಡ ಇದ್ದಾರೆ ಎನ್ನಲಾಗಿದ್ದು, ಪತ್ನಿ ಮತ್ತು ಮಗಳು ಶಿಫಾಝ್ ನ ತಂದೆ ಮತ್ತು ತಾಯಿಯೊಂದಿಗೆ ಕ್ಯಾಲಿಕಟ್ನಲ್ಲಿ ವಾಸವಾಗಿದ್ದಾರೆ.