ಮಂಗಳೂರು, ಮಾ 03 (DaijiworldNews/HR): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕರಣಿಕನಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
ಶಿಕ್ಷೆಗೊಳಗಾದವರನ್ನು ಎಸ್. ಮಹೇಶ್ ಎಂದು ಗುರುತಿಸಲಾಗಿದೆ.
ಸುಳ್ಯ ಮಂಡೆಕೋಲಿನ ಗೋಪಾಲಕೃಷ್ಣ ಅವರ ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗೆ 60,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 2016ರ ಜೂ. 7ರಂದು 45,000 ರೂ.ಗಳನ್ನು ಲಂಚದ ಹಣವಾಗಿ ಸ್ವೀಕರಿಸುವ ಸಂದರ್ಭ ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.
ಇನ್ನು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಮಾ. 2ರಂದು ಅಪರಾಧಿ ಎಸ್. ಮಹೇಶ್ನಿಗೆ 4 ವರ್ಷಗಳ ಜೈಲು ಹಾಗೂ 70,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದು, ದಂಡ ಕಟ್ಟಲು ವಿಫಲನಾದರೆ ಮತ್ತೆ 8 ತಿಂಗಳ ಜೈಲು ಶಿಕ್ಷೆಗೆ ಆದೇಶಿಸಿದ್ದಾರೆ.