ಉಡುಪಿ, ಮಾ. 02 (DaijiworldNews/SM): ಮಣಿಪಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳವು ಪ್ರಕರಣದಲ್ಲಿ ಪೋಲಿಸರು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಸೇರಿಸಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.
ಫೆಬ್ರವರಿ 18 ರಾತ್ರಿ 17:00 ಗಂಟೆಯಿಂದ ಫೆಬ್ರವರಿ 19 ರಂದು ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ ಕೃಷ್ಣ ಕೃಪಾ ಹೆಸರಿನ ಮನೆಗೆ ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ ಅಂದಾಜು 20 ಗ್ರಾಂ ಕಿವಿಯ ಯೋಲೆ ಮತ್ತು ಸರ, ಅಂದಾಜು 20 ಗ್ರಾಂ ಪೆಂಡೆಂಟ್ ಇರುವ ಚಿನ್ನದ ಸರ, ಅಂದಾಜು 4 ಗ್ರಾಂ ಚಿನ್ನದ ಉಂಗುರ, ಅಂದಾಜು 8 ಗ್ರಾಂ ಚಿನ್ನದ ಸರ, 2 ಗ್ರಾಂ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000/- ಆಗಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಭಂದಪಟ್ಟಂತೆ ಮಾರ್ಚ್ 02 ಆರೋಪಿತರಾದ ವರುಣ ಪ್ರಾಯ (19 ವರ್ಷ) ಅಲೆವೂರು ಆದರ್ಶ್ ನಗರ, ಮತ್ತು ಕಾರ್ತಿಕ ಪೂಜಾರಿ (19ವರ್ಷ), ನೆಹರೂ ನಗರ, ಮೂಡು ಅಲೆವೂರು, ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ 2 ಬಾಲಕರನ್ನು ಪೆರಂಪಳ್ಳಿ ಶೀಂಬ್ರಾ ಕ್ರಾಸ್ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡುವಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದು, ಅವರುಗಳಿಂದ ಕಳವು ಮಾಡಿದ 2,40,000/- ರೂ ಚಿನ್ನಾಭರಣಗಳನ್ನು ಮತ್ತು 1 ಸ್ಕೂಟರ್ ಹಾಗೂ ಕೃತ್ಯಕ್ಕೆ ಬಳಸಿದ 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈ ಹಿಂದೆ ಕುಂದಾಪುರ ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ 2 ಪ್ರಕರಣಗಳು ಹಾಗೂ ಮಣಿಪಾಲ ಠಾಣೆಯ 1 ಪ್ರಕರಣ ಸೇರಿ ಒಟ್ಟು 3 ಪ್ರಕರಣದಲ್ಲಿ ಭಾಗಿಯಾಗಿದ್ದು, ಸದರಿ 3 ಪ್ರಕರಣಗಳನ್ನು ಭೇದಿಸಿ ಆರೋಪಿತರುಗಳಿಂದ ಸುಮಾರು 4 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಎಮ್ ಎಚ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ಧಲಿಂಗಪ್ಪ ಟಿ ಕೆ.ಎಸ್.ಪಿ.ಎಸ್ ರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ, ಡಿ.ವೈ.ಎಸ್.ಪಿ ಉಡುಪಿ, ದೇವರಾಜ ಟಿ.ವಿ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ, ನವೀನ್ ನಾಯ್ಕ್ ಪಿ.ಎಸ್.ಐ ಮಣಿಪಾಲ ಠಾಣೆ, ರುಕ್ಮ ನಾಯ್ಕ್ ಪಿ ಎಸ್ ಐ ಮಣಿಪಾಲ ಠಾಣೆ ಹಾಗೂ ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ಗಂಗಪ್ಪ ಎಸ್, ಎ.ಎಸ್.ಐ ನಾಗೇಶ್ ನಾಯಕ್, ಎ.ಎಸ್.ಐ ಶೈಲೇಶ್ ಕುಮಾರ್, ಪ್ರಸನ್ನ ಸಿ, ಇಮ್ರಾನ್, ಸುಕುಮಾರ್ ಶೆಟ್ಟಿ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.