ಉಳ್ಳಾಲ,ಮಾ 02 (DaijiworldNews/MS): ಒಂದು ರಸ್ತೆ, ಒಂದೇ ಅನುದಾನ, ಆದರೆ ಉದ್ಘಾ ಟನೆ ಮಾತ್ರ ಎರಡೆರಡು.!ಹೀಗೊಂದು ವಿಲಕ್ಷಣ ಪ್ರಕರಣ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಬಿಜೆಪಿ-ಕಾಂಗ್ರೆಸ್ ನಡುವಿನ ರಸ್ತೆ ರಾಜಕೀಯಕ್ಕೆ ಸಾಕ್ಷಿಯಾಗಿದೆ.
ಕೋಟೆಕಾರ್ ಪಟ್ಟಣ ಪಂಚಾ ಯತ್ ವ್ಯಾಪ್ತಿಯಲ್ಲಿರುವ ಕುಂಪಲ ಬೈಪಾಸ್ನಿಂದ ಬಗಂಬಿಲ ಮೂಲಕ ಯೇನಪೋಯ ಆಸ್ಪತ್ರೆಯನ್ನು ಸಂಪರ್ಕಿಸುವ ರಸ್ತೆ ಬಹುತೇಕ ಕಾಂಕ್ರೀಟ್ನಿಂದ ಕೂಡಿದೆ. ಈ ರಸ್ತೆಗೆ ವಿವಿಧ ಹಂತದಲ್ಲಿ ಸರಕಾರದಿಂದ ಅನುದಾನ ಬಂದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಪ್ರಯತ್ನವೂ ಇದೆ. ಈ ನಡುವೆ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಐದನೇ ವಾರ್ಡ್ ಬಗಂಬಿಲ ಕೆಎಚ್ಬಿ ಕಾಲೊನಿ ಬಳಿ ಒಂದಷ್ಟು ರಸ್ತೆ ಕಾಮಗಾರಿ ಬಾಕಿಯಾಗಿತ್ತು.
ಇಲ್ಲಿನ ರಸ್ತೆ ಗುಂಡಿಗಳಿಂದ ಕೂಡಿ ವಾಹನ ಸಂಚಾರವೂ ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಐದು ಲಕ್ಷ ಮತ್ತು ಪಟ್ಟಣ ಪಂಚಾಯತ್ನಿಂದ 10 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಇದೇ ವೇಳೆ ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾಗಿರುವ ಪ್ರವೀಣ್ ಬಗಂಬಿಲ ಅವರ ಭಾವಚಿತ್ರವುಳ್ಳ ಫ್ಲೆಕ್ಸ್ ಜಾಲತಾಣದಲ್ಲಿ ಹರಿದಾಡಿದೆ. ಈ ಫ್ಲೆಕ್ಸ್ನಲ್ಲಿ ಪ್ರವೀಣ್ ಅವರು ಅನುದಾನ ಬಿಡುಗಡೆಗೊಳಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಅಲ್ಲದೆ ಇಂದು ಉದ್ಘಾಟನೆಗೂ ದಿನ ನಿಗದಿಗೊಳಿಸಲಾಗಿದೆ.
ಬಗಂಬಿಲ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲೂ ಹಾಕಲಾಗಿರುವ ಫ್ಲೆಕ್ಸ್ ಜಾಲತಾಣದಲ್ಲಿ ಹರಿದಾಡಿದೆ. ಇದರಲ್ಲಿ ಶಾಸಕ ಖಾದರ್ ಅವರ ಭಾವಚಿತ್ರ ಅಳವಡಿಸಲಾಗಿದ್ದು ಅನುದಾನ ಬಿಡುಗಡೆಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಭಾನುವಾರ ಉದ್ಘಾಟನೆಗೆ ದಿನ ನಿಗದಿಪಡಿಸಲಾಗಿದೆ. ಒಂದೇ ಕಾಮಗಾರಿ, ಒಂದೇ ಅನುದಾನದಲ್ಲಿ ನಡೆದಿರುವ ರಸ್ತೆ ಕಾಮಗಾರಿ ರಾಜಕೀಯ ಮೇಲಾಟಕ್ಕಾಗಿ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಟ್ರೋಲಿಗರ ಪಾಲಿಗೆ ಸಖತ್ ಆಹಾರ ಒದಗಿಸಿದೆ.
ಅನುದಾನ ಯಾರದ್ದು?
ಈ ರಸ್ತೆಗೆ 15ನೇ ಹಣಕಾಸು ಮತ್ತು ಪಟ್ಟಣ ಪಂಚಾಯತ್ ನಿಧಿಯನ್ನು ಬಳಸಲಾಗಿದೆ. ಇವೆರಡೂ ಸರಕಾರದ ಅನುದಾನವೇ ಆಗಿದೆ. ಆದರೆ ವಿದಾನಸಭಾ ಚುನಾವಣೆ ಸನಿಹದಲ್ಲೇ ಇರುವುದರಿಂದ ರಾಜಕೀಯವಾಗಿ ಗೊಂದಲ ಸೃಷ್ಟಿಸಿದೆ. ಕೋಟೆಕಾರ್ ಪಟ್ಟಣ ಪಂಚಾಯತ್ಗೆ 2021, ಡಿಸೆಂಬರ್ 30ರಂದು ಪಟ್ಟಣ ಪಂಚಾಯತ್ನ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಆದರೆ ಇದುವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದ ಕಾರಣ ಅನುದಾನ ಬಳಕೆಯ ಜವಾಬ್ದಾರಿ ಶಾಸಕರದ್ದಾಗಿದ್ದು, ಅವರ ಸೂಚನೆಯನ್ನು ಅಧಿಕಾರಿಗಳು ಪಾಲಿಸಬೇಕಾಗಿದೆ. ರಸ್ತೆ ಕೆಲಸಕ್ಕೂ ಶಾಸಕರ ಸೂಚನೆ ಮೇರೆಗೆ ಅನುದಾನ ಬಳಸಲಾಗಿದೆ ಎನ್ನಲಾಗಿದೆ. ಆದರೆ ಈ ವಿಚಾರವೇ ರಾಜಕೀಯಕ್ಕಾಗಿ ಗೊಂದಲಕ್ಕೆ ಕಾರಣವಾಗಿದ್ದು ಮಾಹಿತಿ ಕೊರತೆ ಇರುವುದು ಯಾರಿಗೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.