ಕಾಸರಗೋಡು, ಮಾ 17(SM): ಸಹಪಾಠಿಗಳ ಜೊತೆ ಹೊಳೆಗೆ ಸ್ನಾನಕ್ಕಿಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರದಂದು ಅಡೂರು ಸಮೀಪದ ಪಯಸ್ವಿನಿ ಹೊಳೆಯಲ್ಲಿ ನಡೆದಿದೆ. ಅಡೂರು ಬಾಬಯ್ಯಮೂಲೆಯ ಜನಾರ್ಧನ ರವರ ಪುತ್ರ ಸ್ವರ್ಣಜಿತ್(14) ಮೃತಪಟ್ಟ ವಿದ್ಯಾರ್ಥಿ.
ಸ್ವರ್ಣಜಿತ್, ಅಡೂರು ಸರಕಾರಿ ಹೈಸ್ಕೂಲಿನ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ರವಿವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ನದಿಯಲ್ಲಿ ಮೋಜು ಮಾಡಲು ತೆರಳಿದ್ದರು. ನದಿಯಲ್ಲಿ ಈಜು, ಮೋಜು ಮಸ್ತಿ ನಡೆಸುತ್ತಿದ್ದ ಸಂದರ್ಭ ಏಕಾಏಕಿ ಸ್ವರ್ಣಜಿತ್ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾನೆ. ಈ ಸಂದರ್ಭ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಕಿರುಚಾಡಿದ್ದಾರೆ.
ವಿದ್ಯಾರ್ಥಿಗಳ ಕಿರುಚಾಟದ ಧ್ವನಿ ಕೇಳಿದ ಸ್ಥಳಿಯರು ಧಾವಿಸಿ ಸ್ಥಳಕ್ಕೆ ಬಂದಿದ್ದಾರೆ. ಹಾಗೂ ನೀರಿಗಿಳಿದು ವಿದ್ಯಾರ್ಥಿಯನ್ನು ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲೇ ಆತ ಮೃತಪಟ್ಟಿದ್ದ ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆದೂರು ಠಾಣಾ ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.