ಬೆಂಗಳೂರು, ಮಾ 17(SM): ಲೋಕಸಭೆಗೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ, ರಾಜಕೀಯ ಪಕ್ಷಗಳ ನಡುವೆ ಟಿಕೆಟ್ ಹಂಚಿಕೆ ತಲೆ ನೋವಾಗಿ ಪರಿಣಮಿಸಿತ್ತು. ಈ ನಡುವೆ, ಇದೀಗ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಸೋಮವಾರ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ.
ಬಿಜೆಪಿ ಪಕ್ಷದ ರಾಜ್ಯ ಚುನಾವಣಾ ಸಮಿತಿ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಕೇಂದ್ರ ಚುನಾವಣಾ ಸಮಿತಿ ಪಟ್ಟಿಯನ್ನು ಪರಿಶೀಲಿಸಿ ಬಳಿಕ ಅಭ್ಯರ್ಥಿಗಳ ಹೆಸರುಗಳನ್ನು ದೆಹಲಿಯಲ್ಲಿ ಪ್ರಕಟಿಸಲಿದೆ ಎಂದು ಬಿಜೆಪಿ ಹೇಳಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಿರುವ ಅಭ್ಯರ್ಥಿಗಳ ಹೆಸರು, ಮಂಡ್ಯದಲ್ಲಿ ಪಕ್ಷದ ನಡೆ, ಹಾಸನದಲ್ಲಿ ಕೈಗೊಳ್ಳಬೇಕಿರುವ ರಾಜಕೀಯ ನಡೆ ಕುರಿತು ಮಹತ್ವದ ಚರ್ಚೆ ನಡೆಯಿತು.
ಮಂಗಳೂರಿನಿಂದ ನಳಿನ್ ಕುಮಾರ್ ಗೆ ಟಿಕೆಟ್?
ಇನ್ನು ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವುದು ಅಂತಿಮಗೊಳಿಸಲಾಗಿದೆ ಎಂದು ಒಂದು ಮೂಲಗಳು ಹೇಳುತ್ತಿವೆ. ಮತ್ತೊಂದು ಮೂಲಗಳ ಪ್ರಕಾರ ಇಲ್ಲಿ ಹೊಸ ಮುಖಕ್ಕೆ ಮಣೆ ಹಾಕಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಆದರೆ, ಆಕಾಂಕ್ಷಿಗಳು ಹೆಚ್ಚಿರುವುದರಿಂದ ಇಲ್ಲಿ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಫೈನಲ್ ಎನ್ನಲಾಗಿದೆ. ಆದರೆ, ಅಂತಿಮವಾಗಿ ಯಾರು ಅಭ್ಯರ್ಥಿ ಅನ್ನೋದು ಸೋಮವಾರ ತಿಳಿಯಲಿದೆ.
ಮಂಡ್ಯದಲ್ಲಿ ಸುಮಲತಾಗೆ ಬೆಂಬಲ?
ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಸಮ್ಮಿಶ್ರ ಸರಕಾರದಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್ ರನ್ನು ಫೈನಲ್ ಮಾಡಲಾಗಿದೆ. ಆದರೆ, ಸುಮಲತಾರನ್ನು ಕಾಂಗ್ರೆಸ್ ಕಡೆಗಣಿಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಸುಮಲತಾ ಸ್ಪರ್ಧಿಸುವುದೇ ಆದಲ್ಲಿ ಅವರಿಗೆ ಬೆಂಬಲ ನೀಡಲು ಬಿಜೆಪಿ ನಿರ್ಧರಿಸಿದೆ. ಆದರೆ, ಸುಮಲತಾ ಅಂಬರೀಶ್ ನಾಳೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಬಳಿಕ ಬಿಜೆಪಿಯ ನಿಲುವು ಫೈನಲ್ ಆಗಲಿದೆ.