ಮಂಗಳೂರು, ನ 4: ದಕ್ಷಿಣ ಕನ್ನಡವನ್ನು ತುಳುನಾಡು ಎಂದು ಮರುನಾಮಕರಣ ಮಾಡಬೇಕು ಎಂಬ ಕೂಗು ಈಗಾಗಲೇ ಎಲ್ಲೆಡೆ ಮೊಳಗುತ್ತಿದೆ. ಈ ನಿಟ್ಟಿನಲ್ಲಿ ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮವನ್ನು ಹೆಚ್ಚಾಗಿ ಪ್ರಸಾರ ಮಾಡಬೇಕು ಎಂದು ಪುತ್ತೂರಿನ ತುಳು ಅಭಿಮಾನಿಯೊಬ್ಬರು ಖಾಸಗಿ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪೆನಿ ಅಂದರೆ ಭಾರತೀಯ ಪ್ರಸಾರ ಕೇಂದ್ರಕ್ಕೆ ಮನವಿ ಮಾಡಿದ್ದರು.
ಆದರೆ ಪ್ರಸಾರ ಭಾರತಿ ಮಂಗಳೂರು ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮಗಳ ಪ್ರಸಾರ ಸಮಯ ಹೆಚ್ಚಿಸಲು ಮಾಡಿರುವ ಮನವಿಯನ್ನು ತಿರಸ್ಕರಿಸಿದೆ. ಮಂಗಳೂರಿನ ಪ್ರಮುಖ ಭಾಷೆ ಕನ್ನಡ ಆಗಿರುವುದರಿಂದ ಮಂಗಳೂರು ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಭಾರತೀಯ ಪ್ರಸಾರ ಕೇಂದ್ರದಲ್ಲಿ ಈಗಾಗಲೇ 6.2 ಗಂಟೆಗಳ ಕಾಲ ತುಳು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ದಕ್ಷಿಣ ಕನ್ನಡದ ಪುತ್ತೂರಿನ ತುಳು ಅಭಿಮಾನಿ ಭರತೇಶ ಎಂಬುವವರು ಆಕಾಶವಾಣಿಯಲ್ಲಿ ತುಳು ಕಾರ್ಯಕ್ರಮ ಹೆಚ್ಚಿಸುವಂತೆ ಪ್ರಸಾರ ಭಾರತಿಗೆ ಮನವಿ ಮಾಡಿದ್ದರು. ಮಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು ಮಾತನಾಡುವ ಜನರಿದ್ದು ಪ್ರಸಾರದ ಸಮಯ ಹೆಚ್ಚಿಸುವಂತೆ ತಮ್ಮ ಮನವಿಯಲ್ಲಿ ಒತ್ತಾಯಸಿದ್ದರು.
ಈ ಮನವಿಗೆ ಉತ್ತರಿಸಿದ ಪ್ರಸಾರಭಾರತಿ, ತುಳು ಕಾರ್ಯಕ್ರಮಗಳ ಪ್ರಸಾರ ಸಮಯವನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.