ಉಡುಪಿ, ಮಾ 17(SM): ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ಯಕ್ಷಗಾನದಲ್ಲಿ ಹಾಸ್ಯದ ರೂಪದಲ್ಲಿ ವ್ಯಂಗ್ಯವಾಡಿದ್ದ ಕಲಾವಿದನ ವಿರುದ್ಧ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ‘ಮಗನೇ ಎಲ್ಲಿದ್ದೀಯ’? ‘ಅಪ್ಪ ಇಲ್ಲಿದ್ದೇನೆ’ ಎಂಬ ಟ್ರೋಲ್ ವಿಷಯವನ್ನು ಕರಾವಳಿಯ ಸಂಸ್ಕೃತಿ ಮತ್ತು ಆರಾಧನೆಯ ಯಕ್ಷಗಾನದಲ್ಲಿ ಹಾಸ್ಯಕ್ಕೆ ಬಳಸಿ ಟ್ರೋಲ್ ಆದ ಹಾಸ್ಯ ಕಲಾವಿದನ ಮೇಲೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಡಾ. ರವಿ ಶೆಟ್ಟಿ ಬೈಂದೂರು ಮತ್ತು ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಬೈಂದೂರು ಠಾಣೆಗೆ ದೂರು ನೀಡಲಾಗಿದೆ. ಕಲೆ, ಕಲಾವಿದರನ್ನು ಮತ್ತು ಯಕ್ಷ ಪ್ರಿಯರನ್ನು ಅವಮಾನಿಸಿ ಮತ್ತು ಅಸಂಬದ್ಧ ಮಾತನ್ನು ಆಡಿದ್ದಾರೆ ಎಂಬ ಆರೋಪದಡಿ ಹಾಸ್ಯ ಕಲಾವಿದನ ಮೇಲೆ ದೂರು ದಾಖಲಿಸಲಾಗಿದೆ.
ಕಲಾವಿದರಿಗೆ ಮಳೆಗಾಲದ ಆರು ತಿಂಗಳು ಸರ್ಕಾರದಿಂದ ಸಂಬಳ ನೀಡಬೇಕು ಉತ್ತಮ ದರ್ಜೆಯ ಬಣ್ಣ ಹಾಗೂ ಸೌಂದರ್ಯವರ್ಧಕಗಳನ್ನು ನೀಡಬೇಕು ಮತ್ತು ಉಚಿತ ಆರೋಗ್ಯ ವಿಮೆ ನೀಡಬೇಕು ಹೀಗೆಲ್ಲಾ ಸರ್ಕಾರಕ್ಕೆ ಮನವಿ ಮಾಡಿದ ನಾನೇ ಈಗ ಒಬ್ಬ ಕಲಾವಿದರ ಮೇಲೆ ದೂರು ದಾಖಲಿಸುತ್ತಿರುವುದು ನನ್ನ ಮನಸ್ಸಿಗೆ ಬಹಳ ನೋವು ಉಂಟಾಗಿದೆ. ಆದರೆ ಮುಂದೊಂದು ದಿನ ಎಲ್ಲ ಕಲಾವಿದರು ತಲೆ ತಗ್ಗಿಸುವಂಥ ಕೆಲಸವಾಗಬಾರದು ಕಲಾ ಪ್ರೇಕ್ಷಕರಿಗೆ ಮನಸ್ಸಿಗೆ ಬೇಸರವಾಗಬಾರದು ಎಂಬ ಉದ್ದೇಶದಿಂದ ದೂರು ನೀಡಬೇಕಾಗಿ ಬಂತು ಎಂದು ಡಾ. ರವಿ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.