ಮಂಗಳೂರು, ಮಾ 01 (DaijiworldNews/DB): ರಾಜ್ಯ ಮಹಿಳಾ ಆಯೋಗವು ಅತ್ಯಂತ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೂರು ದಾಖಲಾದ ಕೆಲವೇ ದಿನದಲ್ಲಿ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ಆರ್. ನಾಯ್ಡು ಹೇಳಿದ್ದಾರೆ.
ಮಾರ್ಚ್ 1ರ ಬುಧವಾರ ನಗರದ ಜಿಲ್ಲಾ ಪಂಚಾಯತ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಹಿಳಾ ಆಯೋಗವು ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇತರೆ ಪ್ರಕರಣಗಳಲ್ಲಿ ಮಹಿಳೆಯರನ್ನು ರಕ್ಷಿಸಲು ಸಶಕ್ತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಹಲ್ಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾಖಲಾದ ದೂರುಗಳನ್ನು ಕೂಡಲೇ ಇತ್ಯರ್ಥ ಪಡಿಸಲು ಹಾಗೂ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು.
2020ರಿಂದ ಮಹಿಳಾ ಆಯೋಗವು ರಾಜ್ಯದಲ್ಲಿ 6,728 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 4,120 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ವಿವಿಧ ಹಂತಗಳಲ್ಲಿ 2,608 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. ಈ ದೂರುಗಳ ಪೈಕಿ 1,400ಕ್ಕೂ ಹೆಚ್ಚು ಪ್ರಕರಣಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ್ದರೆ, 1,905 ಪ್ರಕರಣಗಳು ರಕ್ಷಣೆ ಕೋರಿ, 347 ವರದಕ್ಷಿಣೆ ಕಿರುಕುಳ, 26 ವರದಕ್ಷಿಣೆ ಸಾವು/ಕೊಲೆ, 37 ಲೈಂಗಿಕ ದೌರ್ಜನ್ಯ, 208 ಪೊಲೀಸ್ ದೌರ್ಜನ್ಯ ಪ್ರಕರಣಗಳಾಗಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ 280 ಪ್ರಕರಣಗಳನ್ನು ಸ್ವೀಕರಿಸಲಾಗಿದ್ದು, ಇದುವರೆಗೆ 151 ಪ್ರಕರಣಗಳನ್ನು ಪರಿಹರಿಸಲಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟಲು ಆಂತರಿಕ ದೂರು ಸಮಿತಿ ರಚಿಸುವಂತೆ 2,500 ಕಂಪೆನಿಗಳಿಗೆ ಪತ್ರ ಬರೆದಿದ್ದು, ಇದುವರೆಗೆ 1,100 ಕಂಪೆನಿಗಳಿಂದ ಉತ್ತರ ಸ್ವೀಕರಿಸಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಸಿಡಿಪಿಒ ಕಚೇರಿಗಳಲ್ಲಿ ಒಟ್ಟು 722 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 520 ಪ್ರಕರಣಗಳನ್ನು ಸಂಧಾನದ ಮೂಲಕ ಪರಿಹರಿಸಲಾಗಿದ್ದರೆ, 170 ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದವರು ತಿಳಿಸಿದರು.
ಆಯೋಗವು ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಕೌನ್ಸಿಲಿಂಗ್ ಮೂಲಕ ಕುಟುಂಬ ಪುನರ್ಮಿಲನಕ್ಕೆ ಒತ್ತು ನೀಡುತ್ತಿದೆ. ಅಲ್ಲದೆ, ಹದಿಹರೆಯದವರಲ್ಲಿ ಪ್ರೇಮ ಪ್ರಕರಣಗಳು, ಲಿವ್ ಇನ್ ರಿಲೇಶನ್ಶಿಪ್ ಮತ್ತು ಸೈಬರ್ ಅಪರಾಧಗಳ ಕುರಿತು ಶಾಲೆ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕುಲಂಕುಶವಾಗಿ ಸಭೆ ನಡೆಸಲಾಗಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಹಾಗೂ ವಿವಾಹೇತರ ಸಂಬಂಧಗಳ ಬಗ್ಗೆ ಹೆಚ್ಚಿನ ಪ್ರಕರಣಗಳು ಜಿಲೆಯಲ್ಲಿ ಕಂಡು ಬಂದಿವೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪ ಭೋವಿ ಉಪಸ್ಥಿತರಿದ್ದರು.