ಉಡುಪಿ, ಮಾ 01 (DaijiworldNews/DB): ಇಂದಿನಿಂದ ಆರಂಭಗೊಂಡಿರುವ ಸರ್ಕಾರಿ ನೌಕರರ ಅನಿದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಸರ್ಕಾರಿ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ಸರ್ಕಾರಿ ನೌಕರರು ಕಚೇರಿಗಳಿಗೆ ಹಾಜರಾಗದೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಈ ನಡುವೆ ಸರ್ಕಾರಿ ಸೇವೆಗಳ ಅಲಭ್ಯತೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸಿದರು.
ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡದಿರುವುದು, ಹೊಸ ಪಿಂಚಣಿ ವ್ಯವಸ್ಥೆ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿನಿಂದ ಆರಂಭಗೊಂಡಿದ್ದು, ಮೊದಲ ದಿನದಂದೇ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗದೆ ಮನೆಯಲ್ಲೇ ಕುಳಿತು ಪ್ರತಿಭಟಿಸಿದರು. ಇದರಿಂದ ಜಿಲ್ಲೆಯಲ್ಲಿ ಕಂದಾಯ, ಆರೋಗ್ಯ, ಸಾರಿಗೆ ವ್ಯವಸ್ಥೆಯಲ್ಲಿ ತೀವ್ರ ವ್ಯತ್ಯಯ ಉಂಟಾಯಿತು. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಕಚೇರಿಗಳಿಗೆ ಗೈರು ಹಾಜಾರದರು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಬೇರೆಲ್ಲಾ ಸೇವೆ ಸ್ಥಗಿತಗೊಂಡಿತ್ತು. ಹೊರ ರೋಗಿ ವಿಭಾಗಗಳು ಬಂದ್ ಆಗಿದ್ದವು. ಅಗತ್ಯ ಸೇವೆಗಳಲ್ಲಿದ್ದ ವೈದ್ಯರು, ದಾದಿಯರು ಸಹಿತ ಸರ್ಕಾರಿ ಆರೋಗ್ಯ ಸಿಬಂದಿಗಳು ಕಪ್ಪು ಪಟ್ಟಿ ಧರಿಸಿ ಸೇವೆ ನೀಡಿದರು. ಪ್ರಾದೇಶಿಕ ಸಾರಿಗೆ ಕಚೇರಿಯೂ ಬಂದ್ ಆಗಿತ್ತು. ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸರ್ಕಾರಿ ನೌಕರರು ಕಚೇರಿಗೆ ಆಗಮಿಸದೆ ಮುಷ್ಕರ ನಡೆಸಲಿದ್ದಾರೆ. ಆದರೆ ಎಲ್ಲೂ ಧರಣಿ ಪ್ರತಿಭಟನೆ ನಡೆಸುವುದಿಲ್ಲ. ಗ್ರಾಮ ಪಂಚಾಯತ್ ಕಚೇರಿಗಳಲ್ಲೂ ಸೇವೆ ವ್ಯತ್ಯಯವಾಗಲಿದೆ. ನಗರಸಭೆ ಪುರಸಭೆ ಪಟ್ಟಣ ಪಂಚಾಯತ್ ನಲ್ಲೂ ಸರ್ಕಾರಿ ನೌಕರರು ಇರುವುದಿಲ್ಲ. ಕಚೇರಿಗೆ ಆಗಮಿಸುವವರ ಮನವೊಲಿಸಿ ಮುಷ್ಕರಕ್ಕೆ ಬೆಂಬಲ ಕೋರಲಾಗುವುದು ಎಂದು ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ತಿಳಿಸಿದ್ದಾರೆ.